ಜಿಲ್ಲೆ

ಯಾವೊಂದು ದೂರು ಬಾರದಂತೆ ಕೆಲಸ ಮಾಡಿ

ರೇವಣಸಿದ್ದಪ್ಪ ಪಾಟೀಲ್

ಕಮಲನಗರ: ಶಾಸಕ ಪ್ರಭು ಚವ್ಹಾಣ್ ಬುಧವಾರ ವಿವಿಧೆಡೆ ಗ್ರಾಮ ಸಂಚಾರ ನಡೆಸಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.
ಸಾವರಗಾಂವ, ಬಾವಲಗಾಂವ, ಹೊಕ್ರಾಣ, ನಂದಿಬಿಜಲಗಾಂವ, ಚಿಕ್ಲಿ(ಯು), ಖೇಮಾನಾಯಕ ತಾಂಡಾ, ಗಂಗನಬೀಡ, ದಾಬಕಾ(ಸಿ), ಮುತಖೇಡ, ಹಂದಿಕೇರಾ, ಡೊಂಗರಗಾಂವ, ಮುರ್ಕಿ, ಕಮಲನಗರ ಮೊದಲಾದ ಗ್ರಾಮಗಳಲ್ಲಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳನ್ನು ವೀಕ್ಷಿಸಿದರು. ಶಾಲಾ-ಕಾಲೇಜು ಆರಂಭವಾಗಿದ್ದು, ಬೋಧನಾ ಚಟುವಟಿಕೆ ವ್ಯವಸ್ಥಿತವಾಗಿ ನಡೆಯಬೇಕು. ಶಿಕ್ಷಕರೆಲ್ಲರೂ ಸಮಯ ಪಾಲನೆ ಜತೆಗೆ ಪಾಠ ಬೋಧನೆ ಮಾಡಬೇಕು. ಶಿಕ್ಷಕರ ಕೆಲಸದ ಬಗ್ಗೆ ಯಾವೊಂದು ದೂರು ಬರದಂತೆ ಎಚ್ಚರ ವಹಿಸಿ ಎಂದು ಸೂಚಿಸಿದರು.
ಭೇಟಿ ನೀಡಿದ ಶಾಲೆ ಆವರಣದಲ್ಲಿ ಸಂಚರಿಸಿ ಸ್ವಚ್ಛತೆ ಮತ್ತಿತರ ವ್ಯವಸ್ಥೆ ವೀಕ್ಷಿಸಿದ ಅವರು, ಆರೋಗ್ಯದ ಹಿತದೃಷ್ಟಿಯಿಂದ ಸ್ವಚ್ಛತೆ ಅತಿ ಮುಖ್ಯ. ಹಾಗಾಗಿ ತಮ್ಮ ಶಾಲೆ ಆವರಣ ಶುಚಿಯಾಗಿಟ್ಟುಕೊಳ್ಳುವ ಜತೆಗೆ ಮಕ್ಕಳಲ್ಲೂ ಸ್ವಚ್ಛತೆ ಜಾಗೃತಿ ಮೂಡಿಸಬೇಕು. ಶಾಲೆಯಲ್ಲಿನ ಶಿಕ್ಷಕರ ಹಾಜರಿ ಬಗ್ಗೆ ಮಾಹಿತಿ ಪಡೆದು ಗೈರಾಗಿರುವ ಬೋಧಕರ ವಿರುದ್ಧ ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ಪತ್ರ ಬರೆಯುವಂತೆ ಸೂಚನೆ ನೀಡಿದರು. ಶಾಲೆಗಳಲ್ಲಿ ಏನೇನು ಕೊರತೆಯಿದೆ ಎಂಬ ಪಟ್ಟಿ ನೀಡಿದರೆ ಅಗತ್ಯ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿದರೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಕಾಣಬಹುದಾಗಿದೆ. ಆದ್ದರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪರಿಣಾಮಕಾರಿ ಶಿಕ್ಷಣ ನೀಡಬೇಕು. ಎಲ್ಲ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸಲಹೆ ನೀಡಿದರು.
ಮುಖಂಡರಾದ ಧೋಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಸತೀಶ ಪಾಟೀಲ್, ಕೇರಬಾ ಪವಾರ್, ಶಿವಕುಮಾರ ವಡ್ಡೆ, ಶಿವು ಝುಲದೆ, ಸಂಜುಕುಮಾರ ಮುರ್ಕಿ, ಸಚಿನ್ ಬಿರಾದಾರ್, ರಂಗರಾವ ಜಾಧವ್, ಬಸವರಾಜ ಪಾಟೀಲ್, ನಾಗೇಶ ಪತ್ರೆ, ಮಲ್ಲಪ್ಪ ದಾನಾ, ಸಚಿನ್ ರಾಠೋಡ್, ಸುಜೀತ್ ಪವಾರ್, ಸುರೇಶ ಭೋಸ್ಲೆ, ಅಶೋಕ ಹಲಮಂಡಗೆ ಇತರರಿದ್ದರು.

ಸೌಲಭ್ಯ ಸರಿಯಾಗಿ ತಲುಪಿಸಿ
ಗ್ರಾಮ ಸಂಚಾರ ವೇಳೆ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ಶಾಸಕ ಪ್ರಭು ಚವ್ಹಾಣ್, ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ ಏನೇನು ಸೌಲಭ್ಯಗಳು ಸಿಗುತ್ತಿವೆ ಎಂದು ಮಾಹಿತಿ ಪಡೆದರು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸರಿಯಾಗಿ ಕೆಲಸ ಮಾಡಬೇಕು. ಮಹಿಳೆಯರು ಮತ್ತು ಮಕ್ಕಳಿಗಾಗಿ ಇರುವ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಸೂಚಿಸಿದರು.

ರೂ.10 ಕೋಟಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ
ಬೋಂತಿ ತಾಂಡಾ, ಸಾವರಗಾಂವ, ಬಾವಲಗಾಂವ, ಹೊಕ್ರಾಣ, ನಂದಿಬಿಜಲಗಾಂವ, ಚಿಕ್ಲಿ(ಯು), ಖೇಮಾನಾಯಕ ತಾಂಡಾ, ಗಂಗನಬೀಡ, ದಾಬಕಾ(ಸಿ), ಮುತಖೇಡ, ಹಂದಿಕೇರಾ, ಡೊಂಗರಗಾಂವ, ಮುರ್ಕಿ, ಕಮಲನಗರ, ಸೋನಾಳ, ಹೊಳಸಮುದ್ರ, ಬೆಳಕುಣಿ(ಬಿ), ಭವಾನಿ ಬಿಜಲಗಾಂವ ಸೇರಿ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಿ ಅಂಗನವಾಡಿ ಕೇಂದ್ರ, ಸಕರ್ಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸೋಲಾರ್ ಪ್ಯಾನಲ್ ಅಳವಡಿಕೆ, ಹೆಚ್ಚುವರಿ ತರಗತಿ ಕೋಣೆ, ಪೀಠೋಪಕರಣಗಳ ಅಳವಡಿಕೆ, ಸಿಸಿ ರಸ್ತೆ, ಚರಂಡಿ ಒಳಗೊಂಡು 10 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಚವ್ಹಾಣ್ ಶಂಕುಸ್ಥಾಪನೆ ನೆರವೇರಿಸಿದರು.