ಕಮಲನಗರ: ಶಾಸಕ ಪ್ರಭು ಚವ್ಹಾಣ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯಲ್ಲಿರುವ ವೈದ್ಯರ ಪೈಕಿ ಕೆಲವರು ಮಾತ್ರ ಹಾಜರಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಚವ್ಹಾಣ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಅನಧಿಕೃತ ಗೈರಾಗುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿದರು.
ನಂತರ ಆಸ್ಪತ್ರೆ ವಿವಿಧ ವಾಡ್೯ಗಳಲ್ಲಿ ಸಂಚರಿಸಿ ರೋಗಿಗಳ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು. ಔಷಧ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗೆ ಬಡ ಜನತೆ ಬರುವುದರಿಂದ ಸೌಜನ್ಯದಿಂದ ವ್ಯವಹರಿಸಬೇಕು. ಅವರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಆಸ್ಪತ್ರೆಯಲ್ಲಿರುವ ವೈದ್ಯರು, ಸಿಬ್ಬಂದಿ ಎಷ್ಟು?, ಎಷ್ಟು ಬೆಡ್ಗಳಿವೆ ಮತ್ತು ರೋಗಿಗಳ ಸಂಖ್ಯೆ ಎಷ್ಟು? ಔಷಧ ಲಭ್ಯತೆ ಹೀಗೆ ನಾನಾ ರೀತಿಯ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು. ಎಕ್ಸ್ರೇ ವಿಭಾಗದಲ್ಲಿ ತಜ್ಞರು ಲಭ್ಯವಿಲ್ಲದ್ದನ್ನು ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ ಚವ್ಹಾಣ್, ಉತ್ತಮ ಕೋಣೆ ಹಾಗೂ ಯಂತ್ರಗಳಿದ್ದರೂ ತಜ್ಞ ಸಿಬ್ಬಂದಿ ಲಭ್ಯವಿಲ್ಲ. ಎಕ್ಸ್ರೇ ನಿರ್ವಹಣೆಗೆ ಹೊಸ ಸಿಬ್ಬಂದಿ ನಿಯೋಜಿಸುವಂತೆ ಡಿಎಚ್ಒಗೆ ಸೂಚಿಸಿದರು.
ವೈದ್ಯಕೀಯ ಸೇವೆ ಅತ್ಯಂತ ಪವಿತ್ರವಾದದ್ದು. ಬೇಜವಾಬ್ದಾರಿ ಸಹಿಸುವುದಿಲ್ಲ. ಆಸ್ಪತ್ರೆ ಎಲ್ಲ ಸಿಬ್ಬಂದಿ ಪ್ರಾಮಾಣಿಕ ಕೆಲಸ ಜತೆಗೆ ಸಮಯ ಪಾಲನೆ ಮಾಡಬೇಕು. ಕೆಲಸದ ಅವಧಿಯಲ್ಲಿ ಕಡ್ಡಾಯವಾಗಿ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ನೀಡಬೇಕು. ದೂರು ಬಂದಲ್ಲಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಮುಂದೆಯೂ ಸರ್ಕಾರಿ ಆಸ್ಪತ್ರೆಗಳಿಗೆ ಹಠಾತ್ ಭೇಟಿ ನೀಡುತ್ತೇನೆ. ವೈದ್ಯರು ಮತ್ತು ಸಿಬ್ಬಂದಿ ಸರಿಯಾಗಿ ಕೆಲಸ ಮಾಡಬೇಕು. ಸಣ್ಣ ಪುಟ್ಟ ಸಮಸ್ಯೆಗಳಿಗೆ ರೋಗಿಗಳನ್ನು ಜಿಲ್ಲಾ ಕೇಂದ್ರಕ್ಕೆ ಶಿಫಾರಸು ಮಾಡಕೂಡದು. ಆಸ್ಪತ್ರೆ ಸುಧಾರಣೆಗೆ ಏನೇನು ಬೇಕೆಂಬ ಬಗ್ಗೆ ಪಟ್ಟಿ ಸಿದ್ಧಪಡಿಸಿ ಕೊಟ್ಟರೆ ಒದಗಿಸಲಾಗುವುದು ಎಂದು ಹೇಳಿದರು.
ಮುಖಂಡರಾದ ಧೋಂಡಿಬಾ ನರೋಟೆ, ಪ್ರವೀಣ ಕಾರಬಾರಿ, ಶಿವಕುಮಾರ ವಡ್ಡೆ, ನಾಗೇಶ ಪತ್ರೆ, ರಾಜು ಅಲಬಿದೆ, ಸಚಿನ್ ರಾಠೋಡ್, ರಾಜು ಶೆಳ್ಕೆ, ಸಂಜು ಮುರ್ಕೆ ಇತರರಿದ್ದರು.