ಬೀದರ್: ಬೀದರ್-ನಾಂದೇಡ್ ರೈಲ್ವೆ (ವಾಯಾ ಔರಾದ್, ದೇಗಲೂರ) ಹೊಸ ರೈಲ್ವೆ ಲೈನ್ ಕಾಮಗಾರಿ ಆರಂಭಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಹಿಂದಿನ ಸರ್ಕಾರದಲ್ಲಿ ಬೀದರ್- ನಾಂದೇಡ್ ರೈಲ್ವೆ ಲೈನ್ ಮಂಜೂರಾಗಿ, ಪಿಂಕ್ ಬುಕ್ನಲ್ಲಿ ಸೇರ್ಪಡೆಗೊಳಿಸಿ ರೈಲ್ವೆ ಇಲಾಖೆಯಿಂದ ಈ ಯೋಜನೆಗೆ 150 ಕೋಟಿ ರೂ. ಮೀಸಲಿಟ್ಟು, ಸರ್ವೇ ಕೆಲಸ ಮುಗಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಈ ಯೋಜನೆಗೆ ರಾಜ್ಯದ ಪಾಲಿನ ಅನುದಾನ ಬಜೆಟ್ನಲ್ಲಿ ಮೀಸಲಿಟ್ಟಿದ್ದರು. ಆದರೆ ನಂತರ ಬಂದ ಸಿದ್ದರಾಮಯ್ಯ ಸರ್ಕಾರ ಈ ಅನುದಾನವನ್ನು ರದ್ದುಗೊಳಿಸಿತು. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.
ಈ ಯೋಜನೆಗೆ ವಿಶೇಷ ಗಮನ ಹರಿಸಿ ಕರ್ನಾಟಕ ಸರ್ಕಾರದಿಂದ ಅಗತ್ಯ ಸಹಕಾರ ಪಡೆದು ಈ ಭಾಗದ ಅಭಿವೃದ್ಧಿಗೆ ಒತ್ತು ನೀಡುವ ಬೀದರ್-ನಾಂದೇಡ್ ಮಾರ್ಗದ ಕಾಮಗಾರಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.
ಒಂದು ಕಾಲದಲ್ಲಿ ಕಾಂಗ್ರೆಸ್ನವರಿಗೆ ಬೀದರ್ ನಿಂದ ಹೊರಡುವ ಒಂದು ರೈಲಿನ ಸಮಯ ಬದಲಾಯಿಸಲು ಆಗಿರಲಿಲ್ಲ. ನನ್ನ ಹತ್ತು ವರ್ಷಗಳ ಅವಧಿಯಲ್ಲಿ ಬೀದರ್ ಕ್ಷೇತ್ರದ ರೈಲ್ವೆ ಉತ್ತಮ ಅಭಿವೃದ್ಧಿ ಕಂಡಿದೆ. ಬೀದರ್-ಕಲಬುರಗಿ ರೈಲ್ವೆ ಲೈನ್ ಪೂರ್ಣ, ವಿವಿಧ ಹೊಸ ರೈಲು ಆರಂಭ, ಬೀದರ್ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ಹಲವು ಕೆಲಸ ಮಾಡಲಾಗಿದೆ. ಬೀದರ್ ನಿಂದ ಹುಬ್ಬಳ್ಳಿ, ಬೆಳಗಾವಿ ಹಾಗೂ ಬೆಂಗಳೂರಿಗೆ ಹೊಸ ರೈಲುಗಳು ನೀಡಬೇಕೆಂದು ಈ ಹಿಂದೆ ಮನವಿ ಮಾಡಿದ್ದು, ಬರುವ ದಿನಗಳಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಕೋರಿದ್ದಾರೆ. ಬೀದರ್-ನಾಂದೇಡ್ ರೈಲ್ವೆ ಮಾರ್ಗ ಸೇರಿ ಎಲ್ಲ ಬೇಡಿಕೆಗಳ ಈಡೇರಿಕೆಗೆ ವಿಶೇಷ ಒತ್ತು ನೀಡಲಾಗುವುದೆಂದು ಸಚಿವರು ತಿಳಿಸಿದ್ದಾರೆ ಎಂದು ಖೂಬಾ ಹೇಳಿದ್ದಾರೆ.
ಗ್ಯಾರಂಟಿ ಲೂಟಿ, ತೈಲ ಬೆಲೆ ಹೆಚ್ಚಳಕ್ಕೆ ಖಂಡನೆ
ಕಾಂಗ್ರೆಸ್ ಸರ್ಕಾರದ ಇನ್ನೊಂದು ಮುಖ ಕಳಚಿ ಬಿದ್ದಿದೆ. ಗ್ಯಾರಂಟಿ ಹೆಸರಲ್ಲಿ ಒಂದು ಕಡೆಯಿಂದ ಕೊಟ್ಟು ಇನ್ನೊಂದು ಕಡೆಯಿಂದ ಕಿತ್ತುಕೊಳ್ಳುವ ಕೆಲಸ ಮಾಡುತ್ತಿರುವ ಸರ್ಕಾರದ ಕ್ರಮಕ್ಕೆ ಖಂಡಿಸಲಾಗುವುದು ಎಂದು ಭಗವಂತ ಖೂಬಾ ಹೇಳಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ಕಾಂಗ್ರೆಸ್ ಲೂಟಿ ಸರ್ಕಾರ ಎಂಬುದು ತೋರಿಸಿಕೊಟ್ಟಿದೆ. ಗ್ಯಾರಂಟಿ ಹೆಸರಲ್ಲಿ ಒಂದು ರೀತಿ ಲೂಟಿ, ತೆರಿಗೆ ಹೆಚ್ಚಳದಿಂದ ಮತ್ತೊಂದು ರೀತಿ ಲೂಟಿ. ಒಟ್ಟಿನಲ್ಲಿ ಈ ಸರ್ಕಾರದಿಂದ ಜನರ ದುಡ್ಡು ಗ್ಯಾರಂಟಿಯಾಗಿ ಲೂಟಿಯಾಗುತ್ತಿದೆ. ತಕ್ಷಣ ತೈಲ ಬೆಲೆ ಹೆಚ್ಚಳ ಆದೇಶ ವಾಪಸ್ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.