ಜಿಲ್ಲೆ

ಅಪರಾಧ ಕೇಸ್ ಪತ್ತೆಗೆ ಅಮೆರಿಕ ಮಾದರಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕಳ್ಳತನ ಸೇರಿ ಇತರ ಅಪರಾಧ ಪ್ರಕರಣಗಳ ತಕ್ಷಣ ಪತ್ತೆಗೆ ಜನರ ಸಹಭಾಗಿತ್ವದೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಅಮೆರಿಕ ಮಾದರಿ ತಂತ್ರಜ್ಞಾನ ಅಳವಡಿಕೆಗೆ ಸಿದ್ಧತೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಹೇಳಿದರು.
ಈಗಾಗಲೆ ನಿಗರಾಣಿ ವ್ಯವಸ್ಥೆ ಎಲ್ಲ ತಾಲೂಕುಗಳಲ್ಲಿ ಜಾರಿಯಲ್ಲಿದೆ. ಬೀಗ ಹಾಕಿದ ಮನೆಗಳ ಮೇಲೆ ಖಾಕಿ ಪಡೆ ನಿಗರಾಣಿ ಮಾಡುತ್ತಿದೆ. ಜತೆಗೆ ಇದೀಗ ಹೊಸ ತಂತ್ರಜ್ಞಾನ ಅಳವಡಿಕೆಯೊಂದಿಗೆ ನೂತನ ಪ್ರಯೋಗಕ್ಕೆ ಮುಂದಾಗಿರುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮನೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುತ್ತಾರೆ. ಆದರೆ ಅವು ಕೇವಲ ಮನೆಯೊಳಗೆ ಬರುವವರನ್ನು ಮಾತ್ರ ಕಾಣಿಸುವಂತಿರುತ್ತವೆ. ಕ್ಯಾಮರಾಗಳು ಮನೆ ಅಕ್ಕಪಕ್ಕ ಹಾಗೂ ಸುತ್ತಲೂ ಕಾಣಿಸುವಂತೆ ಇರಬೇಕು. ಸಿಸಿ ಕ್ಯಾಮರಾ ಅಳವಡಿಸಿರುವ ಬಗ್ಗೆ ಜಿಲ್ಲಾ ಪೊಲೀಸ್ ಗೆ ಮಾಹಿತಿ ನೀಡಿದರೆ ಇಲಾಖೆ ಸಿಸ್ಟಮ್ನಲ್ಲಿ ಅಳವಡಿಸಿಕೊಳ್ಳುತ್ತೇವೆ. ಯಾವುದೇ ಅಪರಾಧ ನಡೆದಲ್ಲಿ ನಾವೇ ಖುದ್ದು ಮನೆಯವರಿಗೆ ಎಲ್ಲ ಮಾಹಿತಿ ಒದಗಿಸುತ್ತೇವೆ ಎಂದು ಹೇಳಿದರು.
ಈಗಾಗಲೆ ಅಮೆರಿಕದ ಡಲಾಸ್ ಪ್ರದೇಶದ ಪೊಲೀಸರು ಈ ವ್ಯವಸ್ಥೆ ಆರಂಭಿಸಿದ್ದಾರೆ. ಈ ಬಗ್ಗೆ ನಮ್ಮ ತಾಂತ್ರಿಕ ತಂಡ ಕೂಡ ಎರಡು ತಿಂಗಳಿಂದ ಇದರಲ್ಲಿ ತೊಡಗಿಸಿಕೊಂಡಿದ್ದು, ಒಂದೆರಡು ತಿಂಗಳಲ್ಲಿ ಈ ವ್ಯವಸ್ಥೆ ಜಿಲ್ಲೆಯಲ್ಲೂ ಶುರುವಾಗಲಿದೆ ಎಂದರು.
ಜಿಲ್ಲೆಯಲ್ಲಿ ಅಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿ ಕಾನೂನಿಗೆ ಭಂಗ ತರುವವರನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ. ಜಿಲ್ಲೆಯಲ್ಲಿ 18 ರೌಡಿಶೀಟರ್ ಗಳನ್ನು ಆರು ತಿಂಗಳು ಗಡಿಪಾರು ಮಾಡಲಾಗಿದೆ. ಅದರಲ್ಲಿ ಕೆಲವರು ಮರಳಿ ಬಂದಿದ್ದಾರೆ. ಇದಲ್ಲದೆ ಗೂಂಡಾ ಕಾಯ್ದೆಯಡಿ ಒಬ್ಬನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಕಾನೂನಿಗೆ ಭಂಗ ತರುವ ದುಷ್ಟಶಕ್ತಿಗಳನ್ನು ಮಟ್ಟ ಹಾಕಲಾಗುವುದು ಎಂದು ಎಚ್ಚರಿಸಿದರು.
ಮಹಾರಾಷ್ಟ್ರದ ಉಮರ್ಗಾ ಬಳಿ ದೊರೆತ ಜಿಲ್ಲೆಯ ಯೋಗ ಶಿಕ್ಷಕ ದೊಂಡಿರಾಮ ಚಾಂದಿವಾಲೆ ಮೃತದೇಹ ಪ್ರಕರಣದ ತನಿಖೆ ನಡೆಯುತ್ತಿದೆ. ಅಲ್ಲಿನ ಪೊಲೀಸರ ತನಿಖೆ ನಂತರವೇ ಚಾಂದಿವಾಲೆ ನಿಗೂಢ ಸಾವಿನ ಬಗ್ಗೆ ತಿಳಿಯಲಿದೆ ಎಂದರು.
ಚಾಂದಿವಾಲೆ ಜೇಬಿನಲ್ಲಿ ಸಿಕ್ಕ ಬಸ್ ಟಿಕೆಟ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ನಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮೃತರ ಕೈ ಗಡಿಯಾರ ಮತ್ತು ಮೊಬೈಲ್ ನಾಪತ್ತೆಯಾಗಿದೆ ಎಂದು ಕುಟುಂಬಸ್ಥರು ಗಮನಕ್ಕೆ ತಂದಿದ್ದು, ಅವರನ್ನು ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿರುವುದಾಗಿ ಹೇಳಿದರು.
ಹೆಚ್ಚುವರಿ ಎಸ್ಪಿಗಳಾದ ಮಹೇಶ ಮೇಘಣ್ಣನವರ್, ಚಂದ್ರಕಾಂತ ಪೂಜಾರಿ, ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ್ ಬೀದರ್, ಜೆ.ಎಸ್. ನ್ಯಾಮೇಗೌಡ ಹುಮನಾಬಾದ್ ಇತರರಿದ್ದರು.

375 ಆಟೋ ಸೀಟ್ ತೆರವು
ಆಟೋ ಚಾಲಕರು ತಮ್ಮ ಪಕ್ಕದಲ್ಲೇ ಸೀಟ್ ಅಳವಡಿಸಿ ಶಾಲಾ ಮಕ್ಕಳನ್ನು ಕೂಡಿಸಿಕೊಂಡು ಹೋಗುವುದನ್ನು ಸಂಚಾರ ಪೊಲೀಸರು ತಡೆದಿದ್ದು, ಜಿಲ್ಲೆಯಲ್ಲಿ 375 ಸೀಟ್‌ಗಳನ್ನು ತೆರವುಗೊಳಿಸಿ ಆಟೋ ಚಾಲಕರಿಗೆ ದಂಡ ಹಾಕಲಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ. ಅಪಘಾತ ಹಾಗೂ ಅವಘಡ ತಡೆಯುವ ನಿಟ್ಟಿನಲ್ಲಿ ಬೀದರ್ ನಗರದಲ್ಲಿ 170, ಹುಮನಾಬಾದ್ 55, ಬಸವಕಲ್ಯಾಣದಲ್ಲಿ 85 ಆಟೋ ಚಾಲಕರ ಪಕ್ಕ ಅಕ್ರಮವಾಗಿ ಅಳವಡಿಸಿದ್ದ ಸೀಟುಗಳನ್ನು ತೆರವುಗೊಳಿಸಲಾಗಿದೆ ಎಂದರು. ಆಟೋ ಚಾಲಕರು ನಿಯಮಗಳಿಗೆ ವಿರುದ್ಧವಾಗಿ ಸೀಟುಗಳನ್ನು ಅಳವಡಿಸಿರುವುದು ಕಂಡರೆ ಸಂಚಾರ ನಿಯಮದಂತೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

36 ಆರೋಪಿಗಳ ಬಂಧನ
ಜಿಲ್ಲೆಯ ಎಂಟು ಪೊಲೀಸ್ ಠಾಣೆಗಳಲ್ಲಿ ದಾಖಲಾದ ವಿವಿಧ 30 ಪ್ರಕರಣಗಳಲ್ಲಿನ 36 ಆರೋಪಿಗಳನ್ನು ಬಂಧಿಸಿ 75,13,300 ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಲಂಗೋಟಿ ಹೇಳಿದರು. ಜನವಾಡ, ನೂತನ ನಗರ ಠಾಣೆ, ಗಾಂಧಿಗಂಜ್, ಹುಮನಾಬಾದ್, ಚಿಟಗುಪ್ಪ, ಬಸವಕಲ್ಯಾಣ ನಗರ, ಹುಲಸೂರು, ಭಾಲ್ಕಿ ನಗರ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಪತ್ತೆ ಹಚ್ಚಿ 495 ಗ್ರಾಂ ಬಂಗಾರ (26,77,300 ರೂ. ಮೌಲ್ಯ), 330 ಗ್ರಾಂ ಬೆಳ್ಳಿ (18,600 ರೂ. ಮೌಲ್ಯ), ನಗದು 34,400 ರೂ., ಒಂದು ಮೊಬೈಲ್, 10 ದ್ವಿಚಕ್ರ ವಾಹನ, ಎರಡು ನಾಲ್ಕು ಚಕ್ರ ವಾಹನ, 350 ಸೆಂಟ್ರಿಂಗ್ ಪ್ಲೇಟ್, ಎರಡು ಪಂಪ್ಸೇಟ್ ಹೀಗೆ ಒಟ್ಟು 75,13,300 ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಿ 36 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.