ಔರಾದ್: ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಶಾಸಕ ಪ್ರಭು ಚವ್ಹಾಣ್ ಮಂಗಳವಾರ ದಿಢೀರ್ ಭೇಟಿ ನೀಡಿ ಬಿತ್ತನೆ ಬೀಜ ವಿತರಣೆಯನ್ನು ಪರಿಶೀಲಿಸಿದರು.
ಕೇಂದ್ರದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲದಿರುವುದನ್ನು ಕಂಡು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಅವ್ಯವಸ್ಥೆ ಹೀಗೆ ಮುಂದುವರಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಬಗ್ಗೆ ಮಾಹಿತಿ ಪಡೆದ ಶಾಸಕ ಚವ್ಹಾಣ್, ರೈತರಿಗೆ ಅಗತ್ಯವಿರುವಷ್ಟು ದಾಸ್ತಾನು ಇರಬೇಕು. ಕೊರತೆ ಬೀಳುವ ಸಾಧ್ಯತೆಗಳಿದ್ದಲ್ಲಿ ಮುಂಚಿತವಾಗಿಯೇ ಸಂಬಂಸಿದವರಿಗೆ ಮಾಹಿತಿ ನೀಡಿ ತರಿಸಿಕೊಳ್ಳಬೇಕು. ಯಾವ ಕಾರಣಕ್ಕೂ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗಬಾರದು. ವಿತರಣೆ ಕೆಲಸದಲ್ಲಿ ಲೋಪವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಬಿತ್ತನೆ ಬೀಜ ಅಕ್ರಮವಾಗಿ ಅನ್ಯ ರಾಜ್ಯಗಳಿಗೆ ಸಾಗಿಸುತ್ತಿರುವ ಬಗ್ಗೆ ದೂರುಗಳಿವೆ. ಇಂಥವುಗಳಿಗೆ ಆಸ್ಪದ ಕೊಡಬಾರದು. ಸರ್ಕಾರದ ಹಂತದಲ್ಲಿ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ. ಸಂಬಂಧಿಸಿದವರೊಂದಿಗೆ ಮಾತನಾಡಿ ಸರಿಪಡಿಸುವೆ. ರೈತರಿಗೆ ಯಾವುದೇ ರೀತಿಯಲ್ಲಿ ಅನನುಕೂಲ ಆಗದಂತೆ ಕೃಷಿ ಅಧಿಕಾರಿಗಳು ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.
ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಕೇರಬಾ ಪವಾರ್, ಖಂಡೋಬಾ ಕಂಗಟೆ ಇತರರಿದ್ದರು.