ಜಿಲ್ಲೆ

ಪದವೀಧರರ ಸಮಸ್ಯೆಗಳಿಗೆ ಶೀಘ್ರ ಪರಿಹಾರ

ರೇವಣಸಿದ್ದಪ್ಪ ಪಾಟೀಲ್

ಕಮಲನಗರ: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಸೇರಿದಂತೆ ನಿರುದ್ಯೋಗಿ ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗಿದ್ದು, ಈಶಾನ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್ ಅವರಿಗೆ ಬೆಂಬಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ವಿಧಾನ ಪರಿಷತ್ನ ಈಶಾನ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 371 (ಜೆ) ಕಲಂ ಅನುಷ್ಠಾನಗೊಳಿಸಿ, ಅದರ ಮೂಲಕ ಈ ಭಾಗದ ಅಭಿವೃದ್ಧಿಗೆ ನಾನಾ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಈ ಭಾಗದ ನಿರುದ್ಯೋಗಿ ಪದವೀಧರರಿಗೆ 371 (ಜೆ) ಅಡಿ ಶೈಕ್ಷಣಿಕ, ಸಾಮಾಜಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಕಾಂಗ್ರೆಸ್ ಸರ್ಕಾರ ನೀಡಿದ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಯುವ ನಿಧಿ ಯೋಜನೆ ಅಡಿ ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ.ಭತ್ಯೆ ನೀಡಲಾಗುತ್ತಿದೆ. ಸರ್ಕಾರಿ ನೌಕರರ 7ನೇ ವೇತನ ಆಯೋಗ ಜಾರಿಗೊಳಿಸುವುದು ಮತ್ತು ಹೊಸ ಪಿಂಚಣಿ ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರ ಬದ್ದವಾಗಿದೆ ಎಂದರು.
ಜಿಲ್ಲೆಯಲ್ಲಿ 26 ಸಾವಿರ ಪದವೀಧರ ಮತ್ತು ಶಿಕ್ಷಕ ಮತದಾರರಿದ್ದು, ಜೂ.3ರಂದು ನಡೆಯುವ ಚುನಾವಣೆಯಲ್ಲಿ ಕ್ರ.ಸಂ.2ರ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಹಣಮಂತರಾವ ಚವ್ಹಾಣ್, ಎಸ್.ಎಸ್. ರಾಂಪುರೆ, ಮಲ್ಲಿಕಾರ್ಜುನ ಪಾಟೀಲ್ ಇದ್ದರು. ಪ್ರಾಚಾರ್ಯ ಶಿವಾಜಿ ಆರ್.ಎಚ್. ನಿರೂಪಣೆ ಮಾಡಿದರು.