ಜಿಲ್ಲೆ

ರಾಜ್ಯ ಸರ್ಕಾರದ ಹೇಡಿತನ ಪ್ರದರ್ಶನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಪ್ರಚೋದಿಸಿ ಬಹುಸಂಖ್ಯಾತರ ಮೇಲೆ ಹಲ್ಲೆ, ಕೊಲೆ, ದಬ್ಬಾಳಿಕೆ ನಡೆಸಲು ಅವಕಾಶ ನೀಡಿ ತನ್ನ ಹೇಡಿತನ ಪ್ರದರ್ಶಿಸುತ್ತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಕಿಡಿಕಾರಿದ್ದಾರೆ.
ನಗರದ ಜಿಎನ್.ಡಿ ಕಾಲೇಜಿನ ಘಟನೆ, ನ್ಯೂಟೌನ್ ಸಿಪಿಐ ಮೇಲೆ ರೌಡಿಶೀಟರ್ ಚಾಕು ಇರಿತ ಮತ್ತು ಚನ್ನಗಿರಿ ಠಾಣೆಯಲ್ಲಿನ ದಾಳಿ ಖಂಡನೀಯ. ಪ್ರಭು ಶ್ರೀರಾಮ ಸಮಸ್ತ ಹಿಂದುಗಳ ಭಾವನೆಗಳಲ್ಲಿ ಬೆರೆತಿದ್ದಾರೆ. ಜಿಎನ್ಡಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಜೈಶ್ರೀರಾಮ ಹಾಡಿಗೆ ಡಾನ್ಸ್ ಮಾಡುತ್ತಿದ್ದಾಗ ಮುಸ್ಲಿಂ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದು ಅಕ್ಷಮ್ಯ. ಕೂಡಲೆ ಹಲ್ಲೆ ಮಾಡಿರುವ ಎಲ್ಲರನ್ನು ಬಂಧಿಸಬೇಕು. ನಿರ್ಲಕ್ಷಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಖೂಬಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಘಟನೆ ನಂತರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್ ಕಾಲೇಜಿಗೆ ತೆರಳಿ ಹಲ್ಲೆ ಮಾಡಿರುವ ವಿದ್ಯಾರ್ಥಿಗಳನ್ನು ರಕ್ಷಿಸುವಂತೆ ಕಾಲೇಜಿನವರಿಗೆ ತಿಳಿಸಿದ್ದಾರೆ. ಹಿಂದು ಜನರು ಮತ ಹಾಕಿ ಗೆಲ್ಲಿಸಿದ್ದಕ್ಕೆ ಒಳ್ಳೆಯ ಉಪಕಾರ ಮಾಡುತ್ತಿದ್ದಾರೆ. ಖಂಡ್ರೆ ಮತ್ತು ಖಾನ್ ಒತ್ತಡಕ್ಕೆ ಮಣಿದು ಹಲ್ಲೆಗೊಳಗಾದ ಯುವಕರ ವಿರುದ್ಧವೂ ಎಫ್ಐಆರ್ ಮಾಡಿದ್ದು ಸರಿಯಲ್ಲ. ತಕ್ಷಣವೇ ಹಿಂದು ಯುವಕರ ಮೇಲಿನ ಕೇಸ್ ಜಿಲ್ಲಾಡಳಿತ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.