ಬೀದರ್: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು ಸರ್ಕಾರಿ ನೌಕರ ಫಿರೋಜುದ್ದೀನ್ ಖಾನ್ ಖಮ್ರೊದ್ದೀನ್ ಖಾನ್ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ. ದಂಡ ವಿಧಿಸಿದೆ.
ಸರ್ಕಾರಿ ಸೇವಾ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಬಗ್ಗೆ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಗೌಪ್ಯ ಮಾಹಿತಿ ಸಂಗ್ರಹಿಸಿ 2008ರ ಫೆ.6ರಂದು ಬೀದರ್ ಗುರುನಗರ ಕಾಲನಿ ಮನೆ, ನೆಹರು ಕ್ರೀಡಾಂಗಣ ಹತ್ತಿರದ ಫಿರೋಜುದ್ದೀನ್ ಸಂಬಂಧಿ ಮನೆ ಮತ್ತು ಗೋಲೆಖಾನಾದಲ್ಲಿರುವ ಸಹೋದರನ ಮನೆ ಮೇಲೆ ದಾಳಿ ಮಾಡಿ ಬೆಳ್ಳಿ, ಬಂಗಾರದ ಒಡವೆ, ನಗದು ಮತ್ತು ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಫಿರೋಜುದ್ದೀನ್ ಕಾರ್ಯನಿರ್ವಹಿಸುವ ಹುಮನಾಬಾದ್ ಕಚೇರಿಯಲ್ಲಿ ಸಹ ಶೋಧನೆ ಮಾಡಲಾಗಿತ್ತು. ಲೋಕಾಯುಕ್ತ ಡಿವೈಎಸ್ಪಿ ಟಿ.ಜಿ. ರಾಯ್ಕರ್ ಪ್ರಕರಣದ ತನಿಖೆ ನಡೆಸಿ ಕೋಟ್೯ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯಕುಮಾರ ಎಂ.ಆನಂದಶೆಟ್ಟಿ ಅವರು, ಫಿರೋಜುದ್ದೀನ್ ಆದಾಯಕ್ಕಿಂತ 6,43,345 (ಶೇ.20.65) ರೂ. ಹೆಚ್ಚಿನ ಅಕ್ರಮ ಆಸ್ತಿ ಹೊಂದಿರುವುದು ಸಾಬೀತಾಗಿದೆ. ಲಂಚ ನಿಷೇಧ ಕಾಯ್ದೆ ಕಲಂ 13(2)ಕ್ಕೆ 4 ವರ್ಷ ಜೈಲು ಶಿಕ್ಷೆ ಜತೆಗೆ 25 ಲಕ್ಷ ರೂ. ದಂಡ ವಿಧಿಸಿ ಮಂಗಳವಾರ ತೀರ್ಪು ಪ್ರಕಟಿಸಿದ್ದಾರೆ. ದಂಡ ಭರಿಸಲು ತಪ್ಪಿದ್ದಲ್ಲಿ ಹೆಚ್ಚುವರಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದ್ದಾರೆ. ದಾಳಿಯಲ್ಲಿ ದೊರೆತ ಬಂಗಾರ, ಬೆಳ್ಳಿ ಒಡವೆ ಮತ್ತು ನಗದು ಹಣ ಜಪ್ತಿಗೆ ಆದೇಶಿಸಿದ್ದಾರೆ. ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ ಶ್ರೀಮಾಳೆ ವಾದ ಮಂಡಿಸಿದ್ದಾರೆ.
ಗುರುನಗರ ಕಾಲನಿ ನಿವಾಸಿ ಫಿರೋಜುದ್ದೀನ್ 1982ರಲ್ಲಿ ಸಹಾಯಕ ಅಭಿಯಂತರರೆಂದು ಲೋಕೋಪಯೋಗಿ ಇಲಾಖೆಯಲ್ಲಿ ಸರ್ಕಾರಿ ಸೇವೆಗೆ ಸೇರಿದ್ದರು. ನಂತರ ಬೀದರ್ ನಗರ, ಹುಮನಾಬಾದ್ ಮತ್ತು ಇತರ ಸ್ಥಳಗಳಲ್ಲಿ ಕೆಲಸ ನಿರ್ವಹಿಸಿ ಕೃಷ್ಣಾ ಭಾಗ್ಯ ಜಲನಿಗಮದಲ್ಲಿ ಕಾರಂಜಾ ಕಾಲುವೆ ನಿರ್ಮಾಣ ಯೋಜನೆ, ಕಾರಂಜಾ ಏತ ನೀರಾವರಿ, ಜಲಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆಗಳಲ್ಲಿ ಸಹ ಕರ್ತವ್ಯ ನಿರ್ವಹಿಸಿದ್ದಾರೆ. ಕಾರಂಜಾ ಯೋಜನೆ ಹುಮನಾಬಾದ್ ಕ್ಯಾಂಪ್ ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಕರ್ತವ್ಯದಲ್ಲಿದ್ದಾಗ ಲೋಕಾಯುಕ್ತ ದಾಳಿ ನಡೆದಿದೆ.