ಜಿಲ್ಲೆ

ಎಸ್ಸಿ-ಎಸ್ಟಿ ಅನುದಾನ ಅನ್ಯ ಕೆಲಸಕ್ಕೆ ಬಳಕೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲು ಅನುದಾನವನ್ನು ಬೇರೆ ಕೆಲಸಗಳಿಗೆ ಉಪಯೋಗಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದ್ದಾರೆ.
ನಗರದ ಅಪ್ಪ ಇಂಜಿನಿಯರಿಂಗ್, ಗುರುನಾನಕ್ ಇಂಜಿನಿಯರಿಂಗ್ ಹಾಗೂ ಪಶು ವೈದ್ಯಕೀಯ ಕಾಲೇಜುಗಳಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಮತಯಾಚಿಸಿದ ಅವರು, ಎಸ್ಸಿ-ಎಸ್ಟಿ ಜನರ ಅಭಿವೃದ್ಧಿಗಾಗಿ ಇರುವ ಅನುದಾನವನ್ನು ಐದು ಗ್ಯಾರಂಟಿಗಳ ಜಾರಿಗೆ ಬಳಸಲಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದ ಅವಧಿಯಲ್ಲಿ ದುರಾಡಳಿತ ನಡೆಸಿದೆ. ಒಂದೇ ಒಂದು ಅಭಿವೃದ್ಧಿ ಕೆಲಸ ಪ್ರಾರಂಭವಾಗಿಲ್ಲ. ಜತೆಗೆ ಧರ್ಮ ಆಧಾರಿತ ಕಾನೂನುಗಳನ್ನು ತಂದು ಪರಿಶಿಷ್ಟರ ಮೀಸಲಾತಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದರು.
ಎಲ್ಲ ವರ್ಗದ ಜನರಿಗೂ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ಗೆ ವಿಧಾನ ಪರಿಷತ್ ನಲ್ಲಿ ಇಂಥ ಕಾನೂನು ಜಾರಿಗೆ ತರಲು ಅಗತ್ಯ ಬೆಂಬಲ ಸಿಗುತ್ತಿಲ್ಲ. ಪದವೀಧರ ಮತದಾರರು ಇದನ್ನು ಅರಿತು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಅಮರನಾಥ ಪಾಟೀಲ್ ಸೌಮ್ಯ ಸ್ವಭಾವದ ವ್ಯಕ್ತಿ. ಅಲ್ಲದೆ ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿರುವ ಅನುಭವ ಇದೆ. ಪದವೀಧರರು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಸದನದಲ್ಲಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದಿದ್ದಾರೆ. ಹೀಗಾಗಿ ಪಾಟೀಲ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ರೇವಣಸಿದ್ದಪ್ಪ ಜಲಾದೆ, ಶಶಿಧರ ಹೊಸಳ್ಳಿ, ಸುರೇಶ ಮಾಶೆಟ್ಟಿ, ಶಕುಂತಲಾ ಬೆಲ್ದಾಳೆ, ಶಿವಕುಮಾರ ನಿಡೋದಾ, ಗುರುನಾಥ ರಾಜಗೀರಾ, ಸಚ್ಚಿದಾನಂದ ಚಿದ್ರೆ ಇತರರಿದ್ದರು.