ಜಿಲ್ಲೆ

ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಪ್ಯಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್ ಫೆಡರೇಷನ್ ವತಿಯಿಂದ ಹೈದರಾಬಾದ್‍ನಲ್ಲಿ ನಡೆದ ಪ್ರಥಮ ಫೆಡರೇಷನ್ ಕಪ್ ನ್ಯಾಷನಲ್ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಬಾಚಿಕೊಂಡು ಜಿಲ್ಲೆಯ ಪ್ರತಿಭೆ ಮಮಿತಾಬಾಯಿ ಕದ್ರೆ ಸಾಧನೆಗೈದಿದ್ದಾರೆ.
ಕರ್ನಾಟಕವನ್ನು ಪ್ರತಿನಿಧಿಸಿದ ಅವರು 3 ಕಿ.ಮೀ. ನಡಿಗೆ, 800 ಮೀಟರ್ ಓಟದಲ್ಲಿ ಚಿನ್ನ ಹಾಗೂ ಮೂರು ಕಿ.ಮೀ. ಓಟದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಆಸ್ಟ್ರೆಲಿಯಾದಲ್ಲಿ ನಡೆಯಲಿರುವ ವಲ್ರ್ಡ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ಅವರು ಅರ್ಹತೆ ಗಳಿಸಿದ್ದಾರೆ.
ಅಮಲಾಪುರದ ಎರಡು ಮಕ್ಕಳ ತಾಯಿಯಾದ 37 ವರ್ಷದ ಮಮಿತಾಬಾಯಿ ಬೆಂಗಳೂರಿನ ಕೇಂದ್ರ ಕಾರಾಗೃಹದ ಮುಖ್ಯ ವೀಕ್ಷಕಿಯಾಗಿದ್ದಾರೆ.
ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ವಿ. ಶೇಷಮೂರ್ತಿ, ಎಸ್‍ಪಿಗಳಾದ ಮಲ್ಲಿಕಾರ್ಜುನ ಸ್ವಾಮಿ, ಎ.ಎಸ್. ಅನಿತಾ ಮೊದಲಾದವರ ಪ್ರೋತ್ಸಾಹದಿಂದಾಗಿ ವಿವಿಧ ಕ್ರೀಡಾಕೂಟಗಳಲ್ಲಿ ಸಾಧನೆಗೈಯ್ಯಲು ಸಾಧ್ಯವಾಗಿದೆ ಎಂದು ಮಮಿತಾಬಾಯಿ ತಿಳಿಸಿದರು. ಮಮಿತಾಬಾಯಿ ಅವರ ಸಾಧನೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.