ಬೀದರ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಮೇ 20ರಂದು ವರ್ಷವಾಗಲಿದೆ. ಈ ಅವಯಲ್ಲಿ ರಾಜ್ಯದಲ್ಲಿ ಒಂಥರ ಅರಾಜಕತೆ ಪರಿಸ್ಥಿತಿ ಸೃಷ್ಟಿಸಿದ್ದೇ ಸರ್ಕಾರದ ಸಾಧನೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ದೂರಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೊಲೆ, ಸುಲಿಗೆ, ದೌರ್ಜನ್ಯ, ಅತ್ಯಾಚಾರ, ದರೋಡೆ, ನೈತಿಕ ಪೊಲೀಸಗಿರಿ ಸೇರಿ ಅಹಿತಕರ ಘಟನೆಗಳು ಹೆಚ್ಚಾಗಿವೆ. ಅಪರಾಧ ಪ್ರಕರಣಗಳು ಗಣನೀಯ ವೃದ್ಧಿಯಾದ ಬಗ್ಗೆ ಸರ್ಕಾರದ ಕ್ರೈಮ್ ವಿಭಾಗದ ವರದಿಗಳೇ ತಿಳಿಸುತ್ತಿವೆ. ಮೊದಲ ಬಾರಿ ರಾಜ್ಯದಲ್ಲಿ ಈ ಪರಿ ಆಡಳಿತ ವ್ಯವಸ್ಥೆ ಹಾಳಾಗಿದೆ. ಇದಕ್ಕೆಲ್ಲ ಸರ್ಕಾರ ಮತ್ತು ಕಾಂಗ್ರೆಸಿಗರ ತುಷ್ಟೀಕರಣ ರಾಜಕೀಯವೇ ಕಾರಣ ಎಂದು ಅವರು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಹಲ್ಲೆ, ಕಗ್ಗೊಲೆಯಂಥ ಘಟನೆಗಳಿಂದ ಮಹಿಳೆಯರಲ್ಲಂತೂ ಅಸುರಕ್ಷಿತ ಮತ್ತು ಆತಂಕದ ಭಾವ ಮನೆ ಮಾಡಿದೆ. ಹೆಣ್ಮಕ್ಕಳು ಮನೆ ಹೊರಗಡೆ ಮುಕ್ತವಾಗಿ ತಿರುಗಲು ಭಯಪಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೊರಹೋದ ಮಹಿಳೆ ಸುರಕ್ಷಿತವಾಗಿ ರಾತ್ರಿ ಮನೆಗೆ ಬರುತ್ತಾಳಾ? ಇಲ್ವ ಎಂಬ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ, ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಭೀಕರ ಕೊಲೆ, ಮಡಿಕೇರಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ರುಂಡ-ಮುಂಡ ಕತ್ತರಿಸಿ ಹತ್ಯೆ, ಕಲಬುರಗಿಯಲ್ಲಿ ಇಬ್ಬರ, ಯಾದಗಿರಿಯಲ್ಲಿ ಒಬ್ಬರ ಕೊಲೆ ಹೀಗೆ ಬೀದರ್ ನಿಂದ ಚಾಮರಾಜನಗರವರೆಗೆ ವಿಚಿತ್ರ ವಾತಾವರಣ ನಿರ್ಮಾಣವಾಗಿದೆ. ಹತ್ತಾರು ಘಟನೆಗಳು ಕಾಂಗ್ರೆಸ್ ಸರ್ಕಾರದ ಸಾಲು-ಸಾಲು ವೈಫಲ್ಯಗಳಿಗೆ ಸಾಕ್ಷಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೇ ವರ್ಷದಲ್ಲಿ ಸರ್ಕಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳುವ ಬದಲು ಏನೂ ಆಗಿಲ್ಲ ಎಂಬಂತೆ ವರ್ತಿಸಿ ಕುಂಭಕರ್ಣ ನಿದ್ರೆಗೆ ಜಾರಿದೆ. ಸರ್ಕಾರ ತನ್ನ ಐದು ಗ್ಯಾರಂಟಿ ಭರದಲ್ಲಿ ಅಭಿವೃದ್ಧಿಯೇ ಮರೆತಿದೆ. ಸರ್ಕಾರದ ಖಜಾನೆ ಖಾಲಿ ಆಗಿದೆ. ಬರೀ ಸಾಲ ಮಾಡುತ್ತ ಜನರ ಮೇಲೆ ಹೊರೆ ಹಾಕಲಾಗುತ್ತಿದೆ ಎಂದು ದೂರಿದ್ದಾರೆ.
ಬೀದರ್ ಅಭಿವೃದ್ಧಿಗೂ ಬರ
ಕಳೆದೊಂದು ವರ್ಷದಲ್ಲಿ ಬೀದರ್ ಜಿಲ್ಲೆಯಲ್ಲೂ ಯಾವುದೇ ಹೇಳಿಕೊಳ್ಳುವಂಥ ಅಭಿವೃದ್ಧಿ ಕೆಲಸಗಳಾಗಿಲ್ಲ. ಹಿಂದುಳಿದ ಜಿಲ್ಲೆ ಬಗ್ಗೆಯೂ ಸರ್ಕಾರ ಎಳ್ಳಷ್ಟು ಕಾಳಜಿ ಇಲ್ಲ. ಅಭಿವೃದ್ಧಿ ಕೆಲಸಗಳ ಕುರಿತು ಜಿಲ್ಲೆಯ ಇಬ್ಬರು ಸಚಿವರ ಮೇಲೆ ಜನರು ಇಟ್ಟಿದ್ದ ನಿರೀಕ್ಷೆಗಳು ಹುಸಿಯಾಗಿವೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆರೋಪಿಸಿದ್ದಾರೆ. ಜಿಲ್ಲೆಗೆ ಒಂದಾದರೂ ದೊಡ್ಡ ಯೋಜನೆ ಬಂದಿಲ್ಲ. ನಗರದಲ್ಲಿ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣ ಸ್ಥಾಪನೆ ಹೇಳಿಕೆಯಲ್ಲೇ ಉಳಿದಿದೆ. ಬಜೆಟ್ ನಲ್ಲಿ ಘೋಷಿತ ಯೋಜನೆಗಳು ಸಹ ಭರವಸೆಯಾಗಿಯೇ ಉಳಿದಿವೆ. ಜಿಲ್ಲೆಯ ಎಲ್ಲ ತಾಲೂಕು ಬರಪೀಡಿತ ಆಗಿದ್ದರೂ ರೈತರಿಗೆ ಸಮರ್ಪಕ ಪರಿಹಾರ ಸಹ ವಿತರಿಸಿಲ್ಲ ಎಂದು ದೂರಿದ್ದಾರೆ.