ಬೀದರ್: ಲೋಕಸಭೆ ಚುನಾವಣೆ ಮುಗಿದಿದ್ದು, ಜೂ.3ರಂದು ನಡೆಯುವ ಈಶಾನ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಸಜ್ಜಾಗಬೇಕು. ಪಕ್ಷದ ಅಭ್ಯರ್ಥಿ ಅಮರನಾಥ ಪಾಟೀಲ್ ಗೆಲುವಿಗಾಗಿ ಎಲ್ಲರೂ ಶ್ರಮಿಸಬೇಕು ಬಿಜೆಪಿ ರಾಜ್ಯ ಕಾರ್ಯದರ್ಶಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕರೆ ನೀಡಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಲೋಕಸಭೆ ಚುನಾವಣೆ ಕುರಿತ ಅವಲೋಕನ ಸಭೆಯಲ್ಲಿ ಮಾತನಾಡಿ, ಎಂಎಲ್ಸಿ ನಂತರ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬರಲಿವೆ. ತಳಮಟ್ಟದಿಂದ ಸಂಘಟನೆ ಬಲಿಷ್ಠಗೊಳಿಸುವ ಈ ಚುನಾವಣೆಗೆ ಎಲ್ಲರೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಅತ್ಯಂತ ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಪಕ್ಷದ ಎಲ್ಲರಿಗೂ ಹೃದಯಾಂತರಾಳದಿಂದ ಧನ್ಯವಾದ ಸಲ್ಲಿಸುವೆ. ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲ್ಲುವುದು ಖಚಿತ ಎಂಬುದು ಕ್ಷೇತ್ರವಾರು ಪ್ರಮುಖರು ನೀಡಿದ ಮಾಹಿತಿ ಹೇಳುತ್ತಿರುವುದು ಸಂತಸದ ಸಂಗತಿ. ನಾವೆಲ್ಲರೂ ಜೂ.4ಕ್ಕೆ ವಿಜಯೋತ್ಸವ ನಡೆಸೋಣ ಎಂದು ಆಶಾಭಾವ ವ್ಯಕ್ತಪಡಿಸಿದರು.
ಪಕ್ಷದ ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಸೂರ್ಯಕಾಂತ ಢೋಣಿ, ವಿಭಾಗ ಸಹ ಉಸ್ತುವಾರಿ ಈಶ್ವರಸಿಂಗ್ ಠಾಕೂರ್, ಲೋಕಸಭೆ ಚುನಾವಣೆ ಉಸ್ತುವಾರಿ ಹಾಗೂ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಮಾತನಾಡಿದರು. ಪ್ರಮುಖರಾದ ಶಿವಾನಂದ ಮಂಠಾಳಕರ್, ಶಿವರಾಜ ಗಂದಗೆ, ರೌಫೋದ್ದಿನ್ ಕಚೇರಿವಾಲೆ, ಅರಹಂತ ಸಾವಳೆ, ರಾಜಶೇಖರ ನಾಗಮೂರ್ತಿ, ಪೀರಪ್ಪ ಔರಾದೆ, ಕಿರಣ ಪಾಟೀಲ್ ಹಕ್ಯಾಳ, ಮಾಧವ ಹಸೂರೆ ಇತರರಿದ್ದರು.
ಈ ಬಾರಿ ಸಿಗಲಿದೆ ಕಮಲಕ್ಕೆ ಸಾಥ್
ಕಳೆದ ಸಲ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್ ಅವರನ್ನು ಗೆಲ್ಲಿಸಿದ ಪದವೀಧರರು ಇದೀಗ ಭ್ರಮನಿರಸನಗೊಂಡಿದ್ದಾರೆ. ಯಾವ ಕಾರಣಕ್ಕೂ ಈ ಸಲ ಅವರಿಗೆ ಬೆಂಬಲ ನೀಡಲ್ಲ. ಹೆಸರಿಗಷ್ಟೇ ಹುದ್ದೆ ಪಡೆಯುವ ಡಾ.ಪಾಟೀಲ್ ಅವರಿಂದ ಮತದಾರರು ಅಂತರ ಕಾಪಾಡಲಿದ್ದು, ನನಗೆ ಸಾಥ್ ನೀಡಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಈಶಾನ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಜೂ.3ರಂದು ನಡೆಯಲಿರುವ ಚುನಾವಣೆಗಾಗಿ ಪಕ್ಷ ನನಗೆ ಮತ್ತೊಮ್ಮೆ ಟಿಕೆಟ್ ನೀಡಿದೆ. ಸಾಮಾನ್ಯ ಕಾರ್ಯಕರ್ತನಾಗಿ ಮೂರು ದಶಕಗಳಿಂದ ಕೆಲಸ ಮಾಡುತ್ತಿದ್ದೇನೆ. 2012ರಲ್ಲಿ ಟಿಕೆಟ್ ಕೊಟ್ಟಾಗ ಪದವೀಧರರು 4800 ಮತಗಳ ಭಾರಿ ಬಹುಮತಗಳಿಂದ ಗೆಲ್ಲಿಸಿದ್ದರು. ಎಲ್ಲರ ನಿರೀಕ್ಷೆಯಂತೆ ಈ ಭಾಗದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. 2018ರಲ್ಲಿ ನನಗೆ ಟಿಕೆಟ್ ನೀಡಲಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿ ಕೊಟ್ಟ ಜವಾಬ್ದಾರಿ ನಿಭಾಯಿಸಿದ್ದೇನೆ. ಈಗ ಮತ್ತೆ ನೀಡಿದ್ದು, ಈ ಭಾಗದ ಪ್ರಗತಿಗೆ ಅವಿರತ ದುಡಿಯುವ ಸಂಕಲ್ಪ ಮಾಡಿರುವುದಾಗಿ ಹೇಳಿದರು.
ಎಂಪಿ ಎಲೆಕ್ಷನ್ ಕುರಿತು ಸಮಾಲೋಚನೆ
ಲೋಕಸಭೆ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಪ್ರಮುಖರು ಹಾಗೂ ಪಕ್ಷದ ಜಿಲ್ಲಾ, ಮಂಡಲ ಪ್ರಮುಖರ ಅವಲೋಕನ ಸಭೆ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಅಧ್ಯಕ್ಷತೆಯ ಸಭೆಯಲ್ಲಿ ಲೋಕಸಭಾ ಕ್ಷೇತ್ರದ ಬೀದರ್ ಉತ್ತರ, ಬೀದರ್ ದಕ್ಷಿಣ, ಔರಾದ್, ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್, ಚಿಂಚೋಳಿ, ಆಳಂದ ವಿಧಾನಸಭೆ ಕ್ಷೇತ್ರಗಳ ಉಸ್ತುವಾರಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿನ ಬೆಳವಣಿಗೆಗಳ ಕುರಿತು ಸಮಗ್ರ ವಿವರಣೆ ಸಲ್ಲಿಸಿದರು. ಒಟ್ಟು ಮತದಾರರು ಎಷ್ಟು? ಮತದಾನ ಎಷ್ಟಾಗಿದೆ? ಪಕ್ಷದ ಪರ ಬೂತ್ ಮಟ್ಟದಲ್ಲಿ ವಾತಾವರಣ ಹೇಗಿತ್ತು? ಪ್ಲಸ್-ಮೈನಸ್ ಹೇಗಿದೆ ಎಂಬಿತ್ಯಾದಿ ಮಾಹಿತಿ ನೀಡಿದರು. ಇದೇ ವೇಳೆ ಲೋಕಸಭೆ ಚುನಾವಣೆ ನಿರ್ವಹಣಾ ಸಮಿತಿ ವಿಸರ್ಜಿಸಲಾಯಿತು. ಈಶಾನ್ಯ ಪದವೀಧರ ಕ್ಷೇತ್ರದ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿ ರಚಿಸಿ ಹೆಸರು ಘೋಷಣೆ ಮಾಡಲಾಯಿತು.