ಜಿಲ್ಲೆ

ರೂ.15 ಕೋಟಿ ಗಾಂಜಾ ಜಪ್ತಿ

ರೇವಣಸಿದ್ದಪ್ಪ ಪಾಟೀಲ್

ಔರಾದ್: ಗಡಿ ಭಾಗದ ವನಮಾರಪಳ್ಳಿ ಬಳಿ ಭಾನುವಾರ 15 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ.
ಬೆಂಗಳೂರಿನ ಎನ್.ಸಿಬಿ ತಂಡ ಮತ್ತು ಜಿಲ್ಲಾ ಪೊಲೀಸ್ ಜಂಟಿ ಕಾರ್ಯಚಾರಣೆ ನಡೆಸಿ ಗಾಂಜಾ ಮತ್ತು ಸಾಗಣೆ ಮಾಡುತ್ತಿದ್ದ ಲಾರಿ ವಶಪಡಿಸಿಕೊಂಡಿವೆ. ಓಡಿಶಾ ರಾಜ್ಯದ ಮಲ್ಕಾನ್ಗಿರಿ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಗಾಂಜಾ ತುಂಬಿಕೊಂಡು ಮಹಾರಾಷ್ಟ್ರಕ್ಕೆ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಎನ್.ಸಿಬಿ ಬೆಂಗಳೂರು ತಂಡ ಹಿಂಬಾಲಿಸಿದ್ದು, ವನಮಾರಪಳ್ಳಿ ಬಳಿ ಸಿಪಿಐ ರಘುವೀರಸಿಂಗ್ ಮತ್ತು ತಂಡ ವಶಪಡಿಸಿಕೊಂಡಿದೆ. ಆರೋಪಿಗಳನ್ನು ಔರಾದ್ ಠಾಣೆಗೆ ಕರೆತಂದು ಪರಿಶೀಲನೆ ಮಾಡಿದಾಗ ಲಾರಿ ಮೇಲೆ ಸಿಮೆಂಟ್ ಇಟ್ಟಿಗೆ ತುಂಬಿದ್ದು, ಒಳಗಡೆ ಗಾಂಜಾ ಪ್ಯಾಕೇಟ್ಗಳನ್ನು ಅಡಗಿಸಿಟ್ಟಿದ್ದು ಗೊತ್ತಾಗಿದೆ. ಪ್ರಕರಣದಲ್ಲಿ ಹುಮನಾಬಾದ್ ತಾಲೂಕಿನ ಹಂದಿಕೇರಾ ಗ್ರಾಮದ ಇಬ್ಬರನ್ನು ಬಂಧಿಸಲಾಗಿದೆ.
1500 ಕೆಜಿ ಗಾಂಜಾ ಇದ್ದು, ಅಂದಾಜು ಮೌಲ್ಯ 15 ಕೋಟಿ ರೂ. ಎನ್.ಸಿಬಿ ಬೆಂಗಳೂರು ತಂಡದಿಂದ ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮಾಹಿತಿ ನೀಡಿದ್ದಾರೆ.