ಜಿಲ್ಲೆ

ಜಾನುವಾರು ದಾಹ ತಣಿಸಲು ನೀರಿನ ತೊಟ್ಟಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬೇಸಿಗೆಯ ಪ್ರಖರ ಬಿಸಿಲು ಒಂದೆಡೆಯಾದರೆ, ನೀರಿನ ಸಮಸ್ಯೆ ಇನ್ನೊಂದೆಡೆ. ಸಮರ್ಪಕ ನೀರು ದೊರೆಯದೆ ಜನ ಮತ್ತು ಜಾನುವಾರುಗಳು ಪರದಾಡುವಂತಾಗಿದೆ. ಇಂಥ ಸಂದರ್ಭದಲ್ಲಿ ಜಾನುವಾರುಗಳಿಗಾಗಿ ನೀರು ಒದಗಿಸುವ ಕಾರ್ಯ ಸದ್ದಿಲ್ಲದೆ ನಡೆದಿದೆ.
ನಗರದ ವಚನ ಚಾರಿಟೇಬಲ್ ಸೊಸೈಟಿ ನಗರದ ವಿವಿಧೆಡೆ ತೊಟ್ಟಿಗಳನ್ನು ನಿರ್ಮಿಸಿ ಜಾನುವಾರುಗಳ ದಾಹ ನೀಗಿಸುವ ಕಾರ್ಯ ಮಾಡುತ್ತಿದೆ. ಕೇಂದ್ರ ಬಸ್ ನಿಲ್ದಾಣ, ಕೆಇಬಿ ರಸ್ತೆ, ಶ್ರೀ ರಾಘವೇಂದ್ರ ಮಂದಿರ, ಶ್ರೀ ಗಣೇಶ ಮಂದಿರ, ಗಾಂಧಿಗಂಜ್ ಸೇರಿ ನಗರದ 25 ಸ್ಥಳಗಳಲ್ಲಿ ತೊಟ್ಟಿ ಅಳವಡಿಸಿ ನಿತ್ಯ ನೀರು ತುಂಬಲಾಗುತ್ತಿದೆ.
ಸಿಮೆಂಟ್ ನಿಂದ ಸಿದ್ಧಪಡಿಸಿದ 200 ಲೀಟರ್ ಸಾಮಥ್ರ್ಯದ ತೊಟ್ಟಿ ಇಡಲಾಗಿದೆ. ನಿತ್ಯವೂ ಎಲ್ಲ ತೊಟ್ಟಿಗಳಲ್ಲಿ ಬೆಳಗ್ಗೆ, ಸಂಜೆ ನೀರು ತುಂಬಲಾಗುತ್ತಿದೆ. ಬಾಯಾರಿದಾಗ ಜಾನುವಾರುಗಳು ಬಂದು ಕುಡಿಯುತ್ತಿವೆ. ವಚನ ಚಾರಿಟೇಬಲ್ ಸೊಸೈಟಿಯ ಈ ಕಾರ್ಯಕ್ಕೆ ವ್ಯಾಪಕ ಜನಮೆಚ್ಚುಗೆ ವ್ಯಕ್ತವಾಗಿದೆ.
ನೀರಿನ ತೊಟ್ಟಿ ಅಳವಡಿಸಿ ನೀರು ಹಾಕುವ ಕಾರ್ಯಕ್ಕೆ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಡಾ.ಸುರೇಶ ಪಾಟೀಲ್, ಸೊಸೈಟಿ ನಿರ್ದೇಶಕರಾದ ಅಲ್ಲಮಪ್ರಭು ನಾವದಗೇರೆ, ಸಿದ್ರಾಮ ಸೀತಾ, ಶಿವಕುಮಾರ ಸಾಲಿ, ವೀರಪ್ಪ ಜೀರಗೆ, ಜಗನ್ನಾಥ ಶಿವಯೋಗಿ, ಶಿವಶಂಕರ ಟೋಕರೆ, ರಾಜಶೇಖರ ಮೀಸೆ, ಯೋಗಾನಂದ ಸ್ವಾಮಿ, ಪ್ರದೀಪ ವಿಸಾಜಿ, ಶರಣು ಟೊಳ್ಳೆ, ರೇವಣಸಿದ್ದಪ್ಪ ಎಲಮಡಗಿ, ರವಿ ಪಾಟೀಲ್ ಕೈಜೋಡಿಸಿದ್ದಾರೆ.