ಬೀದರ್: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಡೆಸಿದ ರಾಜಿ ಸಂಧಾನದಿಂದ ವಿವಿಧ ಕಾರಣಗಳಿಂದ ದೂರವಾಗಿದ್ದ ಮೂವರು ದಂಪತಿ ಒಂದಾಗಿದ್ದಾರೆ.
ಇಲ್ಲಿನ ಮೈಲೂರಿನ ಸುಮಯ್ಯಾ ಬೇಗಂ ಮತ್ತು ಶಮಿ ದಂಪತಿ, ನೌಬಾದ್ನ ಪೂಜಾ ಮತ್ತು ಸಂತೋಷ ಹಾಗೂ ನೌಬಾದ್ನ ಸುರ್ಕಿತಾ ಮತ್ತು ರಾಹುಲ್ ದಂಪತಿ ಒಂದಾಗಿದ್ದಾರೆ.
ಮಹಿಳಾ ಪೊಲೀಸ್ ಠಾಣೆಯಿಂದ ರಾಜಿ ಸಂಧಾನಕ್ಕಾಗಿ ಅರ್ಜಿ ಬಂದ ಹಿನ್ನೆಲೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಕೆ. ಕನಶೆಟ್ಟಿ ಅವರು ಮೂವರು ದಂಪತಿಗೆ ಕುಟುಂಬದ ಮಹತ್ವ ಕುರಿತು ಮನವರಿಕೆ ಮಾಡಿಸಿ ಒಂದು ಮಾಡಿದರು.
ಮದುವೆ ಮತ್ತು ಕುಟುಂಬಕ್ಕೆ ಸಾಮಾಜಿಕವಾಗಿ ಹೆಚ್ಚಿನ ಸಾಮಾಜಿಕ ಮಹತ್ವ ಇದೆ. ಕುಟುಂಬ ಸಂತಸವಾಗಿದ್ದರೆ ಇಡೀ ಸಮುದಾಯ ಮತ್ತು ಸಮಾಜ ಸುಂದರವಾಗಿರುತ್ತದೆ. ಚಿಕ್ಕ ಪುಟ್ಟ ವಿಚಾರಗಳಿಗೆ ಪೊಲೀಸ್ ಠಾಣೆ, ಕೋಟ್೯ ಅಲೆದಾಡುವ ಬದಲಾಗಿ ಮನೆಯ, ಗ್ರಾಮದ ಹಿರಿಯರ ಮಾತು ದಂಪತಿಗಳು ಕೇಳಿ ನೆಮ್ಮದಿಯಿಂದ ಬದುಕಬೇಕು ಎಂದು ನ್ಯಾಯಾಧೀಶ ಕನಕಟ್ಟೆ ಸಲಹೆ ನೀಡಿದರು.
ಮಹಿಳಾ ಪೊಲೀಸ್ ಠಾಣೆ ಸಿಪಿಐ ರಾಮಪ್ಪ ಸಾವಳಗಿ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಗುಂಡುರಡ್ಡಿ, ಲೋಕಾಯುಕ್ತ ಅಭಿಯೋಜಕ ಕೇಶವ ಶ್ರೀಮಾಳೆ, ಹಿರಿಯ ನ್ಯಾಯವಾದಿ ಬಿ.ಎಸ್. ಪಾಟೀಲ್, ಪ್ರಾಧಿಕಾರದ ಸಿಬ್ಬಂದಿ ಜಗಧೀಶ್ವರ ದೊರೆ, ಆಕಾಶ ಸಜ್ಜನ, ರಾಹುಲ್, ಪ್ರೀತಿ ಜಿ.ಕೆ., ಜೀವನ್, ಯೋಹಾನ್ ಕಾಳೆ, ಈರಮ್ಮ ಇತರರಿದ್ದರು.