ಜಿಲ್ಲೆ

ಗುಡಿಸಲುಮುಕ್ತ ಬೀದರ್ ಗುರಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಿದರೆ ಗುಡಿಸಲುಮುಕ್ತ ಬೀದರ್ ಕ್ಷೇತ್ರ ಮಾಡುವುದಾಗಿ ಪಕ್ಷೇತರ ಅಭ್ಯರ್ಥಿ ಗೋಪಾಲ ಎಂ.ಪಿ. ಗಾರಂಪಳ್ಳಿ ಹೇಳಿದರು.
ಪ್ರವಾಸಿ ತಾಣ ಅಭಿವೃದ್ಧಿ, ನಿರುದ್ಯೋಗಿಗಳಿಗೆ ಉದ್ಯೋಗ, ಭ್ರಷ್ಟಾಚಾರಕ್ಕೆ ಕಡಿವಾಣ ಸೇರಿ ಸಮಗ್ರ ಪ್ರಗತಿಗೆ ಯೋಜನೆ ಹಾಕಿಕೊಂಡಿರುವೆ. ಒಮ್ಮೆ ಅವಕಾಶ ನೀಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕೋರಿದರು.
ಪ್ರಜಾಪ್ರಭುತ್ವದ ಆಳ್ವಿಕೆ ಮೂಲಕ ಜಗತ್ತಿಗೆ ಪ್ರಥಮ ಸಂಸತ್ ನೀಡಿದ ನಾಡು ಇದು. 12ನೇ ಶತಮಾನದಲ್ಲಿ ಬಸವಣ್ಣನವರು ಸೇರಿ ಶರಣರು ಸಮಸಮಾಜ ನಿರ್ಮಿಸಿ ಮಾದರಿಯಾಗಿದ್ದರು. ಆದರೆ ಪ್ರಸ್ತುತ ಈ ನಾಡಿನಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದ್ದು, ಕಡಿವಾಣ ಹಾಕುವ ಅಗತ್ಯವಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪುತ್ರನಿಗೆ ಟಿಕೆಟ್ ಕೊಡಿಸಿ ಕುಟುಂಬ ರಾಜಕಾರಣ ಅಭಿವೃದ್ಧಿ ಮಾಡುತ್ತಿದ್ದಾರೆ. ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಸಾಧನೆ ಶೂನ್ಯ. ಕೇವಲ ಕುರ್ಚಿಗಳನ್ನು ಹಾಕಿದ್ದೇ ಇವರ ಸಾಧನೆ ಎಂದು ದೂರಿದರು.
ಮಾರುತಿ ಗಂದಿಗಿರಾ, ಗಿರಿಮಲ್ಲಪ್ಪ ಹಸನಗುಂಡಗಿ, ರೇವಣಸಿದ್ದಪ್ಪ ಸುಬೇದಾರ್, ಮೌನೇಶ ಗಾರಂಪಳ್ಳಿ, ಸುಭಾಷ ತಾಡಪಳ್ಳಿ, ಅಶ್ವಿನಕುಮಾರ ಭರಂ, ಪ್ರತಾಪ ಗೌಡನಹಳ್ಳಿ, ವಿಜಯಕುಮಾರ ತಾಡಪಳ್ಳಿ ಇತರರಿದ್ದರು.