ಬೀದರ್: ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಮರಾಠ ಸಮುದಾಯಕ್ಕೆ ಟಿಕೆಟ್ ನೀಡುವಲ್ಲಿ ರಾಷ್ಟ್ರೀಯ ಪಕ್ಷಗಳು ನಿರ್ಲಕ್ಷ್ಯ ವಹಿಸಿದ್ದರಿಂದ ನ್ಯಾಯ ಒದಗಿಸಲು ಎಂಪಿ ಎಲೆಕ್ಷನ್ನಲ್ಲಿ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಲಾಗಿದೆ ಎಂದು ಹಿರಿಯ ಮುಖಂಡ ಡಾ.ದಿನಕರ ಮೋರೆ ಹೇಳಿದರು.
ಪ್ರತಿ ಚುನಾವಣೆಯಲ್ಲಿ ಮರಾಠರ ಮತ ಪಡೆಯುವ ಪಕ್ಷಗಳು ಟಿಕೆಟ್ ನೀಡುವಲ್ಲಿ ಮಾತ್ರ ಕಡೆಗಣಿಸುತ್ತಿವೆ. ಹೀಗಾಗಿ ಈ ಸಲ ಸಮಾಜದ ಮುಖಂಡರ ಒತ್ತಾಸೆ ಮೇರೆಗೆ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮುದಾಯ ಹಾಗೂ ಎಲ್ಲ ಹಿತೈಷಿಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿ ಹಿರಿಯರು ಮತ್ತು ಗಣ್ಯರ ಪ್ರೇರಣೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಏ.19ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ್ ಮಾತನಾಡಿ, ಸಮಾಜದ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಡಾ.ದಿನಕರ ಮೋರೆ ಅವರನ್ನು ಸರ್ವಾನುಮತದಿಂದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ನಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಪರಮೇಶ್ವರ ಪಾಟೀಲ್, ರಾಮರಾವ ರಾವಣಗಾಂವೆ, ನರೇಶ ಭೋಸ್ಲೆ ಹಾಗೂ ಡಾ.ದಿನಕರ ಮೋರೆ ನಾಮಪತ್ರ ಸಲ್ಲಿಸಲಿದ್ದು, ಮೂವರು ಉಮೇದುವಾರಿಕೆ ವಾಪಸ್ ಪಡೆಯುವರು. ಮೋರೆ ಅಂತಿಮವಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ಡಾ.ಬಾಲಾಜಿ ಸಾವಳೆಕರ್, ಜನಾರ್ಧನ್ ಬಿರಾದಾರ್, ರಾಮರಾವ ರಾವಣಗಾಂವೆ, ರಾವುಸಾಹೇಬ್ ಬಿರಾದಾರ್, ಯುವರಾಜ ಇದ್ದರು.