ಜಿಲ್ಲೆ

ಬಿಜೆಪಿ ಬೆಂಬಲಕ್ಕೆ ನಾಗಮಾರಪಳ್ಳಿ ತೀರ್ಮಾನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸಹಕಾರ ಕ್ಷೇತ್ರದಲ್ಲಿನ ಅನನ್ಯ ಸಾಧನೆಯಿಂದಾಗಿ ಜಿಲ್ಲಾದ್ಯಂತ ಅಪಾರ ಪ್ರಮಾಣದಲ್ಲಿ ಬೆಂಬಲಿಗರನ್ನು ಹೊಂದಿರುವ ನಾಗಮಾರಪಳ್ಳಿ ಪರಿವಾರವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಬೆಂಬಲಿಸಲು ತೀರ್ಮಾನಿಸಿದೆ.
ನಗರದ ಮಾಧವನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಈ ಕುರಿತು ತೀರ್ಮಾನಿಸಲಾಯಿತು. ಜಿಲ್ಲೆಯ ವಿವಿಧೆಡೆ ಬಂದಿದ್ದ ನಾಗಮಾರಪಳ್ಳಿ ಪರಿವಾರದ ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ನಾಗಮಾರಪಳ್ಳಿ ಪರಿವಾರದ ಎಲ್ಲ ಬೆಂಬಲಿಗರು, ಹಿತೈಷಿಗಳು ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿರುವವರಿಗೆ ಪಾಠ ಕಲಿಸಬೇಕಾಗಿದೆ. ಭಾಲ್ಕಿಯ ಖಂಡ್ರೆ ಪರಿವಾರದ ಡಿಎನ್ಎದಲ್ಲಿ ದ್ವೇಷ ತುಂಬಿಕೊಂಡಿದೆ. ಅಧಿಕಾರದ ದರ್ಪದಿಂದ ಮೆರೆಯುತ್ತಿರುವವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕಾಗಿದೆ ಎಂದರು.
ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಮಾತನಾಡಿ, ಐದು ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದರಲ್ಲಿ ರೈತರಿಗಾಗಿ ಯಾವ ಗ್ಯಾರಂಟಿ ಇದೆ ಎಂದು ಪ್ರಶ್ನಿಸಿದರು. ಬೀಜದ ಗ್ಯಾರಂಟಿ ಇಲ್ಲ, ರಸಗೊಬ್ಬರ, ರೈತರ ಸಾಲ ಮನ್ನಾಕ್ಕೆ ಗ್ಯಾರಂಟಿ ಇಲ್ಲ ಎಂದು ಟೀಕಿಸಿದರು.
ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ, ಜೆಡಿಎಸ್ ನಾಯಕ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ದೇಶದ ಹಿತಕ್ಕಾಗಿ, ಜಿಲ್ಲೆಯ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಗೆಲ್ಲಿಸಬೇಕು. ಕಳೆದ 10 ವರ್ಷಗಳಲ್ಲಿ ಖೂಬಾ ಅವರು ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಗೆದ್ದು, ಅವರು ಇನ್ನಷ್ಟು ಕೆಲಸ ಮಾಡುವ ವಿಶ್ವಾಸ ಇದೆ ಎಂದು ಹೇಳಿದರು.
ಎನ್ಎಸ್ಎಸ್ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ಮಾಜಿ ಶಾಸಕ ಎಂ.ಜಿ. ಮುಳೆ ಮಾತನಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ, ಪ್ರಮುಖರಾದ ವಿಜಯಕುಮಾರ ಪಾಟೀಲ್ ಗಾದಗಿ, ಶಾಂತಕುಮಾರ ಸಾವಳಗಿ, ಬಸವರಾಜ ಪಾಟೀಲ್ ಹಾರೂರಗೇರಿ, ರಾಜು ಕಡ್ಯಾಳ್, ರಾಜಕುಮಾರ ಜವಳೆ, ದೇವೇಂದ್ರ ಸೋನಿ, ಫರ್ನಾಂಡಿಸ್ ಹಿಪ್ಪಳಗಾಂವ, ಅಶೋಕ ಕೋಡಗೆ, ನವಾಜ್ ಖಾನ್, ಸುಂದರ್ ಮಾಳೆಗಾವ್, ಶಿವಕುಮಾರ ಭಾಲ್ಕೆ, ಬಾಲಾಜಿ ಚಹ್ವಾಣ್, ವೀರಶೆಟ್ಟಿ ಪಟ್ನೆ , ಭೀಮರಾವ ಪಾಟೀಲ್, ಶಾಂತಕುಮಾರ ಮುದ್ದಾಳೆ, ನಂದು ಜೋಶಿ ಇತರರಿದ್ದರು.

ನಾಗಮಾರಪಳ್ಳಿ ಫೋಟೋ ತೆಗೆದಿದ್ದಕ್ಕೆ ಕಿಡಿ
ಒಳ್ಳೆಯ ಕೆಲಸ ಮಾಡಿದವರ ಫೋಟೋ ಹಾಕುವ ಪರಂಪರೆ ಇದೆ. ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಡಿಸಿಸಿ ಬ್ಯಾಂಕ್, ಶಾರದಾ ಆರ್.ಸೆಟಿ, ಸಹರ್ದಾ ಸಂಸ್ಥೆಯನ್ನು ಹೇಗೆ ಬೆಳೆಸಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದರೆ ಅವರು (ಅಮರ ಖಂಡ್ರೆ) ಅಕಾರಕ್ಕೆ ಬರುತ್ತಲೇ ನಾಗಮಾರಪಳ್ಳಿ ಅವರ ಫೋಟೋ ತೆಗೆದು ಹಾಕಿದ್ದಾರೆ ಎಂದು ಉಮಾಕಾಂತ ನಾಗಮಾರಪಳ್ಳಿ ಅವರು ಖಂಡ್ರೆ ಕುಟುಂಬದ ವಿರುದ್ಧ ಹರಿಹಾಯ್ದರು. ನಾಗಮಾರಪಳ್ಳಿ ಕಟ್ಟಿ ಬೆಳೆಸಿದ ಬ್ಯಾಂಕ್ ದೇಶದ ಗಮನ ಸೆಳೆಯುವ ರೀತಿಯಲ್ಲಿ ಬೆಳೆದಿದೆ. ನಾನು ಅಧ್ಯಕ್ಷನಾದ ನಂತರ ಬ್ಯಾಂಕ್ ಇನ್ನಷ್ಟು ಪ್ರಗತಿ ಸಾಧಿಸಿತ್ತು. ಆದರೆ ಕಳೆದ ಚುನಾವಣೆಯ ನಂತರ ಬ್ಯಾಂಕಿನ ಸ್ಥಿತಿ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. 6 ತಿಂಗಳಿಂದ ಒಬ್ಬ ರೈತನಿಗೂ ಸಾಲ ನೀಡಿಲ್ಲ ಎಂದು ಆರೋಪಿಸಿದರು.