ಬೀದರ್: ರಾಜ್ಯದ ಸರ್ಕಾರಿ ನರ್ಸಿಂಗ್ ಶಾಲೆ ಹಾಗೂ ಕಾಲೇಜುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ. ಬಿ.ಎಸ್. ಸುಜಾತಾ ರಾಠೋಡ್ ಭರವಸೆ ನೀಡಿದರು.
ನಗರದ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಇರುವ ಸರ್ಕಾರಿ ನರ್ಸಿಂಗ್ ಶಾಲೆಯಲ್ಲಿ ಶನಿವಾರ ನಡೆದ ನರ್ಸಿಂಗ್ ಶಾಲೆಯ ಜಿ.ಎನ್.ಎಂ. 8ನೇ ತಂಡ ಹಾಗೂ ಬ್ರಿಮ್ಸ್ ನರ್ಸಿಂಗ್ ಕಾಲೇಜಿನ ಬಿ.ಎಸ್ಸಿ ನರ್ಸಿಂಗ್ ಎರಡನೇ ತಂಡದ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಹಾಗೂ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನರ್ಸಿಂಗ್ ಶಾಲೆ ಹಾಗೂ ಕಾಲೇಜುಗಳ ಕುಂದು ಕೊರತೆಗಳನ್ನು ನಿವಾರಿಸಲಾಗುವುದು ಎಂದು ತಿಳಿಸಿದರು.
ನರ್ಸಿಂಗ್ ಶಾಲೆ ವಿದ್ಯಾರ್ಥಿಗಳ ಶಿಷ್ಯವೇತನ ಹೆಚ್ಚಳ, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರಾತಿ, ನರ್ಸಿಂಗ್ ಶಾಲೆ ಹಾಗೂ ಕಾಲೇಜಿಗೆ ಬಸ್ ಕಲ್ಪಿಸುವ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು.
ಶುಶ್ರೂಷಾ ವೃತ್ತಿ ವೈದ್ಯಕೀಯ ಕ್ಷೇತ್ರದಲ್ಲೇ ಶ್ರೇಷ್ಠವಾಗಿದೆ. ಶುಶ್ರೂಷಾ ಶಾಲೆ, ಕಾಲೇಜು ವಿದ್ಯಾರ್ಥಿಗಳು ಫ್ಲಾರೆನ್ಸ್ ನೈಟಿಂಗೇಲ್ ಅವರ ಸೇವೆಯನ್ನು ಅನುಕರಿಸಬೇಕು. ಮಾನವೀಯ ನೆಲೆಯಲ್ಲಿ ರೋಗಿಗಳ ಆರೈಕೆ ಮಾಡಬೇಕು ಎಂದು ಸಲಹೆ ಮಾಡಿದರು.
ಸರ್ಕಾರಿ ನರ್ಸಿಂಗ್ ಶಾಲೆ ಹಾಗೂ ಕಾಲೇಜು ಪ್ರಾಚಾರ್ಯ ರಾಜಕುಮಾರ ಮಾಳಗೆ ಮಾತನಾಡಿ, ಸದ್ಯ ಸರ್ಕಾರಿ ನರ್ಸಿಂಗ್ ಶಾಲೆಯ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಕ್ರಮವಾಗಿ ಮಾಸಿಕ ತಲಾ ರೂ. 1,500, ರೂ. 1,700 ಹಾಗೂ ರೂ. 1,900 ಶಿಷ್ಯವೇತನ ಇದೆ. ಇಂದಿನ ಬೆಲೆ ಏರಿಕೆ ದಿನಮಾನಗಳಲ್ಲಿ ಇದು ವಿದ್ಯಾರ್ಥಿಗಳಿಗೆ ಊಟ ಸೇರಿ ಇತರ ಖರ್ಚಿಗೆ ಸಾಲದಾಗಿದೆ. ಶಿಷ್ಯವೇತನ ಮೊತ್ತ ರೂ. 5 ಸಾವಿರಕ್ಕೆ ಏರಿಸಬೇಕು ಎಂದು ಮನವಿ ಮಾಡಿದರು.
ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೂ ಶೀಷ್ಯವೇತನ ಮಂಜೂರು ಮಾಡಬೇಕು. ನರ್ಸಿಂಗ್ ಶಾಲೆ ಹಾಗೂ ಕಾಲೇಜುಗಳಿಗೆ ಬಸ್ ಒದಗಿಸಬೇಕು ಎಂದು ಕೋರಿದರು.
ಕರ್ನಾಟಕ ನರ್ಸಿಂಗ್ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸ ಡಾ. ಮಹೇಶ ಬಿರಾದಾರ ಮಾತನಾಡಿದರು.
ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್, ವೈದ್ಯಕೀಯ ಅಧೀಕ್ಷಕ ಶಿವಯೋಗಿ ಬಾಳಿ, ಬ್ರಿಮ್ಸ್ ಪ್ರಾಚಾರ್ಯ ಡಾ. ರಾಜೇಶ ಪಾರಾ, ನರ್ಸಿಂಗ್ ಅಧೀಕ್ಷಕರಾದ ಸುಧಾ ಚಂದನ್, ಇಮಾನುವೆಲ್ ಕೊಡ್ಡಿಕರ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ. ಸಂಜುಕುಮಾರ ಪಾಟೀಲ, ಡಾ. ಉಮಾ ದೇಶಮುಖ, ಡಾ. ದೀಪಾ ಖಂಡ್ರೆ ಇದ್ದರು. ಅನಿತಾ ದಂಡೆ ಸ್ವಾಗತಿಸಿದರು. ಪ್ರಕಾಶ ಮಹಿಮಾಕರ್ ನಿರೂಪಿಸಿದರು.