ಜಿಲ್ಲೆ

ಖೂಬಾಗೆ ಸ್ವಪಕ್ಷ ಶಾಸಕರೇ ವಿರೋಧ

ರೇವಣಸಿದ್ದಪ್ಪ ಪಾಟೀಲ್

ಬಸವಕಲ್ಯಾಣ: ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಸ್ವಪಕ್ಷದ ಶಾಸಕರೇ ವಿರೋಧ ಮಾಡುತ್ತಿದ್ದಾರೆ. ಎರಡು ಅವಧಿಗೆ ಸಂಸದ, ಕೇಂದ್ರ ಸಚಿವರಾದ ಖೂಬಾ ಅಭಿವೃದ್ಧಿ ಕೆಲಸ ಮಾಡಿಲ್ಲ. ಸುಳ್ಳು ಹೇಳುವಲ್ಲಿ ನಿಸ್ಸಿಮರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ದೂರಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿ, ಕೊಲೆ ಮಾಡಿ ಉಪ ಚುನಾವಣೆ ನಡೆಸಲು ಯೋಜನೆ ರೂಪಿಸಿದ್ದಾರೆ ಎಂದು ಶಾಸಕ ಬಿಜೆಪಿಯ ಪ್ರಭು ಚವ್ಹಾಣ್ ಅವರು ಖೂಬಾ ವಿರುದ್ಧ ದೂರಿದ್ದರು ಎಂದರು
ರೈತರು, ಕಾರ್ಮಿಕರು ಮತ್ತು ಜಿಲ್ಲೆಯ ಭವಿಷ್ಯ ರೂಪಿಸುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಯೋಚಿಸಿ ಮತದಾನ ಮಾಡಬೇಕು. ಸಾಗರ್ ಖಂಡ್ರೆ ನನ್ನ ಮಗ ಎಂದು ವರಿಷ್ಠರು ಟಿಕೆಟ್ ನೀಡಿಲ್ಲ. ಅವರು ಕೆಲ ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡಿ ಜನರ ಸಮಸ್ಯೆ ಆಲಿಸಿ ಪಕ್ಷದ ಸಂಘಟನೆ ಮಾಡಿದ್ದಾರೆ. ಕಾನೂನು ಪದವೀಧರರಾಗಿರುವ ಸಾಗರ್ ಅವರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳುಹಿಸಿದ್ದರೆ ಕಾನೂನಿನ ಮೂಲಕ ಜಿಲ್ಲೆಯ ಅಭಿವೃದ್ಧಿ ಮಾಡಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಮಾತನಾಡಿ, ಭಗವಂತ ಖೂಬಾ ದುರಹಂಕಾರದ ಮಾತನಾಡುತ್ತಿದ್ದಾರೆ. ನಾನು ಚಿಕ್ಕವನು ಎಂದು ಹೇಳುತ್ತಿದ್ದಾರೆ. ನಿಮ್ಮ ಎದುರು ಕುಳಿತು ಜಿಲ್ಲೆಯ ಅಭಿವೃದ್ಧಿಗಾಗಿ ಚರ್ಚೆ ಮಾಡಲು ಸಿದ್ಧ ಎಂದು ಹೇಳಿದರು.
ಪೌರಾಡಳಿತ ಸಚಿವ ರಹೀಮ್ ಖಾನ್, ಶಾಸಕ ಬಿ.ಆರ್. ಪಾಟೀಲ್, ಎಂಎಲ್ಸಿ ಅರವಿಂದಕುಮಾರ ಅರಳಿ, ಮಾಜಿ ಸಚಿವ ರಾಜಶೇಖರ ಪಾಟೀಲ್, ಮಾಜಿ ಎಂಎಲ್ಸಿ ವಿಜಯಸಿಂಗ್, ಮಾಲಾ ಬಿ.ನಾರಾಯಣರಾವ, ಅಶೋಕ ಖೇಣಿ, ಸುಭಾಷ ರಾಠೋಡ್, ಧನರಾಜ ತಾಳಂಪಳ್ಳಿ ಮಾತನಾಡಿದರು.
ಎಂಎಲ್ಸಿಗಳಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಪ್ರಮುಖರಾದ ಭೀಮಸೇನ ಸಿಂಧೆ, ಬಸವರಾಜ ಬುಳ್ಳಾ, ಡಾ.ಗುರಮ್ಮ ಸಿದ್ದಾರಡ್ಡಿ, ಅಮೃತರಾವ ಚಿಮಕೋಡೆ, ಅರ್ಜುನ ಕನಕ, ರವಿ ಗಾಯಕವಾಡ, ಬಸವರಾಜ ಸ್ವಾಮಿ, ಶಿವರಾಜ ನರಶೆಟ್ಟೆ, ಶಶಿಕಾಂತ ದುರ್ಗೆ, ಶಹಜಹಾನ್ ತನ್ವೀರ್ ಶೇಖ, ಲತಾ ಹಾರಕೂಡೆ, ಯುವರಾಜ ಬೆಂಡೆ, ಮನೋಹರ ಮೈಸೆ, ಸಂದೀಪ ಬುಯೆ, ರೈಸೊದ್ದೀನ್, ರವೀಂದ್ರ ಬೋರಾಳೆ, ರಾಮ ಜಾಧವ್, ಶಿವಕುಮಾರ ಬಿರಾದಾರ, ಚಂದ್ರಕಾಂತ ಮೇತ್ರೆ ಇತರರಿದ್ದರು. ಬಸವರಾಜ ಜಾಬಶೆಟ್ಟಿ ಸ್ವಾಗತಿಸಿದರು. ನೀಲಕಂಠ ರಾಠೋಡ್ ನಿರೂಪಣೆ ಮಾಡಿದರು. ಮೀರ್ ಅಜರಲಿ ನವರಂಗ ವಂದಿಸಿದರು.