ಭಾಲ್ಕಿ: ಸ್ವಾತಂತ್ರ್ಯ ಹೋರಾಟಗಾರ, ಹಸಿರು ಕ್ರಾಂತಿ ಹರಿಕಾರ, ಮೊದಲ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ದೇಶಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಹೇಳಿದರು.
ಪಟ್ಟಣದ ತಾಲೂಕು ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಬಾಬು ಜಗಜೀವನರಾಮ್ ಜಯಂತ್ಯುತ್ಸವಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು, ಹಸಿರು ಕ್ರಾಂತಿಗೆ ಕಾರಣರಾದ ಜಗಜೀವನರಾಮ್ ದೇಶದಲ್ಲಿ ಆಹಾರ ಕೊರತೆಯಾಗದಂತೆ ಅಡಿಪಾಯ ಹಾಕಿದರು. ದಲಿತರಷ್ಟೇ ಅಲ್ಲದೆ ಸರ್ವ ಸಮುದಾಯಗಳ ಕಲ್ಯಾಣಕ್ಕಾಗಿ ಶ್ರಮಿಸಿದರು. ಸಮ ಸಮಾಜ ನಿರ್ಮಾಣಕ್ಕೆ ಬದುಕಿನುದ್ದಕ್ಕೂ ಹೋರಾಡಿದರು ಎಂದು ಬಣ್ಣಿಸಿದರು.
ಸ್ವಾತಂತ್ರ್ಯಪೂರ್ವ ಮತ್ತು ನಂತರ ಅಸ್ಪೃಶ್ಯತೆ ನಿವಾರಣೆ ಹೋರಾಟದಲ್ಲಿ ಜಗಜೀವನರಾಮ್ ಪಾತ್ರ ಪ್ರಮುಖವಾಗಿದೆ. ಶೋಷಿತ ಸಮುದಾಯಗಳದ ಏಳಿಗೆಗೆ ಸ್ಪಷ್ಟ ರೂಪ ಕೊಟ್ಟ ಕೆಲವೇ ನಾಯಕರಲ್ಲಿ ಇವರೂ ಒಬ್ಬರು ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ಪುರಸಭೆ ಮಾಜಿ ಅಧ್ಯಕ್ಷರಾದ ಬಸವರಾಜ ವಂಕೆ, ವಿಶ್ವನಾಥ ಮೋರೆ, ಪ್ರಮುಖರಾದ ವಿಲಾಸ ಮೋರೆ, ಜೈಪಾಲ ಭೋರಾಳೆ, ವಿಶ್ವನಾಥ ಬಳಕಟ್ಟೆ ಇತರರಿದ್ದರು.