ಜಿಲ್ಲೆ

ಬಡವರಿಗೆ ವಾತ್ಸಲ್ಯ ಮನೆ ಆಸರೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸಮಾಜದ ಬದಲಾವಣೆ ಆಗಬೇಕಾದಲ್ಲಿ ಬದುಕಿಗೆ ಮೂಲಸೌಕರ್ಯ ಅವಶ್ಯಕ. ಅದರಲ್ಲಿ ಪ್ರಮುಖವಾಗಿ ಸೂರು ಎಂಬ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುತ್ತಿದೆ. ಬಡವರಿಗೆ ಈ ಮನೆಗಳು ಆಸರೆಯಾಗಿವೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ವಿರೂಪಾಕ್ಷ ಗಾದಗಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ನಿಂದ ಗಾದಗಿ ಗ್ರಾಮದಲ್ಲಿ ವಾತ್ಸಲ್ಯ ಯೋಜನೆಯಡಿ ನಿರ್ಮಿಸಿದ ಮನೆಯನ್ನು ಫಲಾನುಭವಿ ಗುಂಡಮ್ಮ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಬಡವರಾದ ಸದಸ್ಯರಿಗೆ ಯೋಜನೆಯಡಿ ಉಚಿತ ವಸತಿ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಸದಸ್ಯರು ನಿವೇಶನ ಹೊಂದಿದ್ದರೆ ಯೋಜನೆ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಧರ್ಮಸ್ಥಳ ಸಂಸ್ಥೆಯಿಂದ ಜಿಲ್ಲೆಯಲ್ಲಿ ಅನೇಕ ರೀತಿಯ ಸೇವಾ ಚಟುವಟಿಕೆಗಳು ಬಹಳ ಯಶಸ್ವಿಯಾಗಿ ನಡೆಯುತ್ತಿದ್ದು, ಮಹಿಳಾ ಸದಸ್ಯರು ನೆಮ್ಮದಿ ಮತ್ತು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆ ಜಿಲ್ಲಾ ನಿರ್ದೇಶಕ ಪ್ರವೀಣ ಮಾತನಾಡಿ, ಧರ್ಮಸ್ಥಳ ಸಂಸ್ಥೆಯಿಂದ ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಮತ್ತು ತರಬೇತಿ ಮೂಲಕ ಸಾಮಾಜಿಕ ಕಳಕಳಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಗುರುನಾಥ ರಾಜಗೀರಾ ಮಾತನಾಡಿ, ಗುಂಡಮ್ಮ ವೃದ್ಧೆ ಮತ್ತು ನಿರ್ಗತಿಕ. ಅವರ ಆರ್ಥಿಕ ಸ್ಥಿತಿ ಕಷ್ಟಕರವಾಗಿರುವುದನ್ನು ಕಂಡು ಧರ್ಮಸ್ಥಳ ಸಂಸ್ಥೆಯ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಿಸಿಕೊಟ್ಟಿರುವುದು ಸಾರ್ಥಕ ಕೆಲಸ ಎಂದರು.
ತಾಲೂಕು ನಿರ್ದೇಶಕ ಪುನೀತ್, ಮುಖಂಡ ನಾಗೇಶ ಇತರರಿದ್ದರು.