ಜಿಲ್ಲೆ

61 ಜನರ ಸೀಳು ತುಟಿ ಉಚಿತ ಶಸ್ತ್ರಚಿಕಿತ್ಸೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕೊಲ್ಗೇಟ್-ಪಾಮೋಲಿವ್ ಇಂಡಿಯಾ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಇಲ್ಲಿಯ ಬಿ.ವಿ. ಭೂಮರಡ್ಡಿ ಕಾಲೇಜು ಎದುರಿನ ವಾಸು ಆಸ್ಪತ್ರೆಯಲ್ಲಿ ಮಕ್ಕಳು ಸೇರಿದಂತೆ 61 ಜನರ ಸೀಳು ತುಟಿ ಹಾಗೂ ಸೀಳು ಅಂಗಳ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಹೈದರಾಬಾದ್‍ನ ಡಾ. ಪ್ರಭಾಕರ, ಭುವನೇಶ್ವರದ ಡಾ. ಸಂಗ್ರಾಮ ಪಾತ್ರೋ, ಡಾ. ಅಭಿತೋಷ, ಬೀದರ್‍ನ ಡಾ. ಕಪಿಲ್ ಪಾಟೀಲ, ಬೆಂಗಳೂರಿನ ಅರವಳಿಕೆ ತಜ್ಞ ಡಾ. ದೀಪಕ್ ಧುಮ್ಮನಸೂರ, ಕಲಬುರಗಿಯ ತೇಜಸ್ವಿನಿ, ಕೋಲ್ಕತ್ತಾದ ಅನಂಕಿ, ಹೈದರಾಬಾದ್‍ನ ಡಾ. ಭವಾನಿ, ಬೀದರ್‍ನ ಡಾ. ದೀಪಿಕಾ ಪಾಟೀಲ ಮೊದಲಾದವರನ್ನು ಒಳಗೊಂಡ ತಂಡವು ಶಸ್ತ್ರಚಿಕಿತ್ಸೆ ನೆರವೇರಿಸಿತು.
80 ಜನರ ಸೀಳು ತುಟಿ ಹಾಗೂ ಸೀಳು ಅಂಗಳ ಉಚಿತ ತಪಾಸಣೆ ನಡೆಸಿ, 61 ಜನರ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಓರಲ್ ಆ್ಯಂಡ್ ಮ್ಯಾಕ್ಸಿಲೋಫೇಶಿಯಲ್ ಸರ್ಜನ್ ಡಾ. ಕಪಿಲ್ ಪಾಟೀಲ ತಿಳಿಸಿದರು.
ಕೊಲ್ಗೇಟ್-ಪಾಮೋಲಿವ್ ಇಂಡಿಯಾ ಲಿಮಿಟೆಡ್ ಪ್ರಾಯೋಜಕತ್ವ, ವಾಸು ಆಸ್ಪತ್ರೆ ಹಾಗೂ ಮಿಷನ್ಸ್ ಸ್ಮೈಲ್ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ರೋಗಿಗಳ ತಪಾಸಣೆ, ಶಸ್ತ್ರಚಿಕಿತ್ಸೆ, ಪ್ರವಾಸ, ಆಹಾರ ಹಾಗೂ ಔಷಧಿ ಸಂಪೂರ್ಣ ಖರ್ಚನ್ನು ಶಿಬಿರದ ಆಯೋಜಕರೇ ಭರಿಸಿದರು ಎಂದು ಹೇಳಿದರು.
ಬಡ ರೋಗಿಗಳ ಅನುಕೂಲಕ್ಕಾಗಿ ಉಚಿತ ಶಿಬಿರ ಸಂಘಟಿಸಲಾಗಿತ್ತು. ಬರುವ ದಿನಗಳಲ್ಲಿ ಬೀದರ್‍ನಲ್ಲಿ ಸೀಳು ತುಟಿ ಹಾಗೂ ಸೀಳು ಅಂಗಳ ಚಿಕಿತ್ಸಾ ಕೇಂದ್ರ ಆರಂಭಿಸುವ ಯೋಜನೆ ಇದೆ ಎಂದು ತಿಳಿಸಿದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೀದರ್ ಉಪ ವಿಭಾಗಾಧಿಕಾರಿ ಲವೀಶ್ ಓರ್ಡಿಯಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ, ವಾಸು ಆಸ್ಪತ್ರೆಯ ಡಾ. ಸಂತೋಷ ರೇಜಂತಲ್, ಡಾ. ನೀತಾ ರೇಜಂತಲ್, ಡಾ. ರಚನಾ ರೇಜಂತಲ್, ಶಿವಕುಮಾರ ಪಾಖಾಲ್, ಸೂರ್ಯಕಾಂತ ರಾಮಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.