ಬೀದರ್: ಅವ್ಯವಹಾರ ಆರೋಪಗಳ ಹಿನ್ನೆಲೆಯಲ್ಲಿ ಬ್ರಿಮ್ಸ್ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭ್ರಷ್ಟಾಚಾರ ನಿರ್ಮೂಲನೆ ಸಮಿತಿ ಆಗ್ರಹಿಸಿದೆ.
ಸಮಿತಿಯ ಹೈದರಾಬಾದ್ ಕರ್ನಾಟಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಜೆಸನ್ ಮೋಡಿ ಹಾಗೂ ಕ್ಷೇತ್ರ ಅಧಿಕಾರಿ ಪ್ರಶಾಂತ ಗುತ್ತೆದಾರ್ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ಬ್ರಿಮ್ಸ್‍ನ ವಿವಿಧ ಹುದ್ದೆಗಳಿಗೆ ಅರ್ಹತೆ ಹೊಂದಿರದ ಅನೇಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಬ್ರಿಮ್ಸ್ ಆಸ್ಪತ್ರೆಯ ಅನೇಕ ಶುಶ್ರೂಷಾಧಿಕಾರಿಗಳನ್ನು ನರ್ಸಿಂಗ್ ಕಾಲೇಜಿಗೆ ನೇಮಕ ಮಾಡಿರುವ ಕಾರಣ ಆಸ್ಪತ್ರೆಗೆ ಬರುವ ರೋಗಿಗಳು ಶುಶ್ರೂಷಾಧಿಕಾರಿಗಳ ಕೊರತೆಯಿಂದ ಪರದಾಡಬೇಕಾಗಿದೆ ಎಂದು ದೂರಿದರು.
ನಿರ್ದೇಶಕರು ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅವರೊಂದಿಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.