ಜಿಲ್ಲೆ

ಅಕ್ಷರ ಕಲಿಸಿದ ಗುರುವಿಗೆ ಗೌರವಿಸಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಅಕ್ಷರ ಕಲಿಸಿದ ಗುರುವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 1973-1984ನೇ ಬ್ಯಾಚ್‍ನ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರು ವಂದನೆ ಹಾಗೂ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗುರು-ಶಿಷ್ಯ ಸಂಬಂಧ ಬಹಳ ಪವಿತ್ರವಾದದ್ದು. ಗುರು ಶಿಷ್ಯನ ಏಳಿಗೆಯನ್ನೇ ಬಯಸುತ್ತಾನೆ. ಶಿಷ್ಯನ ಸಾಧನೆಗೆ ಹೆಮ್ಮೆ ಪಡುತ್ತಾನೆ. ಸುಸಂಸ್ಕøತ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡುತ್ತಾನೆ ಎಂದು ಹೇಳಿದರು.
ಹಳೆಯ ವಿದ್ಯಾರ್ಥಿಗಳು ವಿದ್ಯೆ ಧಾರೆ ಎರೆದ ಗುರುಗಳಿಗೆ ವಂದನೆ ಸಲ್ಲಿಸಿರುವುದು ಪ್ರಶಂಸನೀಯ ಎಂದರು.
ನಿವೃತ್ತ ಶಿಕ್ಷಕರಾದ ಮಲ್ಲಶೆಟ್ಟಿ ಗಾದಗೆ, ಶರಣಪ್ಪ ಪ್ರಭಾ, ಶಾಲಿವಾನ ಪಾರಶೆಟ್ಟಿ, ಕೆ.ಎಂ. ಜ್ಞಾನಿ, ಆರ್. ಸಾಲೋಮನ್ ಕಣಜಿ, ಸುಲಕ್ಷನಾ, ಗಂಗಾರಾಮ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಇದಕ್ಕೂ ಮುನ್ನ ನಿವೃತ್ತ ಶಿಕ್ಷಕರನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಬ್ಯಾಂಡ್, ಬಾಜಾದೊಂದಿಗೆ ಮೆರವಣಿಗೆಯಲ್ಲಿ ರಾಚೋಟೇಶ್ವರ ಸಂಸ್ಥಾನ ಮಠಕ್ಕೆ ಕರೆ ತರಲಾಯಿತು. ಮಠದಲ್ಲಿ ಪುಷ್ಪ ವೃಷ್ಟಿ ಮಾಡಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿಬಾಯಿ ಶಿವಪಾಲಸಿಂಗ್ ಠಾಕೂರ್, ಉಪಾಧ್ಯಕ್ಷೆ ಸುವರ್ಣಾ ಶಿವಕುಮಾರ, ಪಿಡಿಒ ಚಂದ್ರಕಾಂತ ಫುಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ನರಸಿಂಗ್ ಮೋಳಕೇರೆ, ಶಿಕ್ಷಕ ನಾಗನಾಥ ಘನಾಳೆ, ಹಳೆಯ ವಿದ್ಯಾರ್ಥಿಗಳಾದ ವಿಲಾಸ ಕುಲಕರ್ಣಿ, ಶಿವರಾಜ ಮೂಲಗೆ, ಸುರೇಶ ಕುಲಕರ್ಣಿ, ರಾಮಯ್ಯ ಸ್ವಾಮಿ, ಸಂಗಶೆಟ್ಟಿ ಹಲಬರ್ಗೆ, ದಶರಥ ಮೇತ್ರಸ್ಕರ್, ಕಾಶೀನಾಥ ಧರ್ಮಣ್ಣ, ಜ್ಞಾನೋಬಾ ಟಿಳೆಕರ್, ಸುಜಾತಾ ಮನ್ನಳ್ಳಿ, ಪ್ರೇಮಲಾ ಸ್ವಾಮಿ, ಶಿವಶೆಟ್ಟಿ ಸೀತಾ, ಶಿವಕಾಂತ, ಬಸವರಾಜ ಮರೂರ, ರಮೇಶ ಬಾಳೂರಕರ್, ಪ್ರೇಮಸಾಗರ್ ಪಾಟೀಲ ಮತ್ತಿತರರು ಇದ್ದರು.