ಜಿಲ್ಲೆ

ರಾಮನ ಶ್ರೇಷ್ಠ ವ್ಯಕ್ತಿತ್ವಕ್ಕೆ ಪೂಜೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಗತ್ತು ಶ್ರೇಷ್ಠ ವ್ಯಕ್ತಿತ್ವಕ್ಕಾಗಿ ರಾಮನನ್ನು ಪೂಜಿಸುತ್ತಿದೆಯೇ ಹೊರತು ರಾಜ ಎನ್ನುವ ಕಾರಣಕ್ಕಾಗಿ ಅಲ್ಲ ಎಂದು ಸಿದ್ಧಾರೂಢ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ನುಡಿದರು.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಿಮಿತ್ತ ನಗರದ ಸಿದ್ಧಾರೂಢ ಮಠದಲ್ಲಿ ಆಯೋಜಿಸಿದ್ದ ರಾಮೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ರಾಮನಂಥ ರಾಜ, ಪುತ್ರ, ಪತಿ, ಸಹೋದರ ಸಿಗುವುದು ದುರ್ಲಭ. 14 ವರ್ಷ ವನವಾಸಗೈದು ತಂದೆಯ ಆಜ್ಞೆ ಪಾಲಿಸಿದ್ದ. ವನವಾಸಕ್ಕೆ ಹೋದಾಗ ಇಡೀ ಅಯೋಧ್ಯೆ ಉಪವಾಸ ಇತ್ತು. ರಾಮನಿಲ್ಲದ ಊರಲ್ಲಿ ಇರುವುದಿಲ್ಲ ಎಂದು ಅನೇಕರು ಊರು ಬಿಟ್ಟಿದ್ದರು ಎಂದು ತಿಳಿಸಿದರು.
ಧರ್ಮಪಾಲಕ, ಪ್ರಜಾಪಾಲಕ, ಏಕ ಪತ್ನಿ ವೃತಸ್ಥ ರಾಮ ಜಗತ್ತಿನ ಆದರ್ಶ ವ್ಯಕ್ತಿ. ರಾಮನ ಗುಣ ಎಲ್ಲರಲ್ಲಿ ಬರಲಿ ಎಂದು ಆಶಿಸಿದರು.
ಬಹು ದಿನಗಳ ನಂತರ ಅಯೋಧ್ಯೆ ರಾಮ ಮಂದಿರದ ಕನಸು ನನಸಾಗಿದೆ. ರಾಮ ಮೂರ್ತಿಯ ಶಿಲೆ ಕರ್ನಾಟಕದ್ದು ಹಾಗೂ ಅದರ ಶಿಲ್ಪಿ ಕನ್ನಡಿಗ ಎನ್ನುವುದು ಹೆಮ್ಮೆಯ ಸಂಗತಿ. ನನಗೂ ಅಯೋಧ್ಯೆಗೆ ಆಹ್ವಾನ ಇತ್ತು. 7 ಸಾವಿರ ಗಣ್ಯ ಆಹ್ವಾನಿತರಲ್ಲಿ 4,020 ಸಂಖ್ಯೆ ನನ್ನದಾಗಿತ್ತು. ಕಾರಣಾಂತರದಿಂದ ಅಲ್ಲಿಗೆ ಹೋಗಲು ಆಗಲಿಲ್ಲ. ಹೀಗಾಗಿ ಮಠದಲ್ಲೇ ಅದ್ಧೂರಿ ರಾಮೋತ್ಸವ ಆಚರಿಸಿ ಗೌರವಿಸಲಾಗಿದೆ ಎಂದು ಹೇಳಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಉದಯಭಾನು ಹಲವಾಯಿ, ಈಶ್ವರಗೌಡ ಕಮಡಳ್ಳಿ, ಭಾರತಿಬಾಯಿ ಕಣಜಿ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಲಲಿತಾಬಾಯಿ ಶೆಟಕಾರ್, ಪ್ರಭು ಬೆಣ್ಣೆ, ಸತೀಶ ಮಹಾರಾಜ, ವಿನಾಯಕ ದೇವರು, ಡಾ. ಚಂದ್ರಪ್ಪ ಭತಮುರ್ಗೆ, ಲಕ್ಷ್ಮಣ ಪೂಜಾರಿ ಮತ್ತಿತರರು ಇದ್ದರು.