ಬೀದರ್: ಪ್ರಾಮಾಣಿಕ ನಾಗರಿಕರನ್ನು ರೂಪಿಸುವುದೇ ಶಿಕ್ಷಣದ ಧ್ಯೇಯ ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ ನುಡಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ಸಂಚಾಲಿತ ಇಲ್ಲಿಯ ಸಿದ್ಧಾರೂಢ ಪಬ್ಲಿಕ್ ಸ್ಕೂಲ್‍ನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯೆ ಕಲಿತು ದೊಡ್ಡ ಹುದ್ದೆಗೆ ಹೋಗಿ ಮೋಸ, ವಂಚನೆಯ ಹಾದಿ ಹಿಡಿದು ಪಾಪಗೈಯುವವನಿಗಿಂತ ಬಟ್ಟೆ ಹೊಲಿಯುವ ಸಾಮಾನ್ಯ ಕಾಯಕದ ಪ್ರಾಮಾಣಿಕನೇ ಶ್ರೇಷ್ಠ ಎಂದು ತಿಳಿಸಿದರು.
ಈಚಿನ ದಿನಗಳಲ್ಲಿ ವಿದ್ಯಾರ್ಥಿಗಳು ನೀತಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮೊಬೈಲ್ ಅವರನ್ನು ಅಕ್ಷರ ಜ್ಞಾನದಿಂದ ದೂರ ಮಾಡಿದೆ. ಮಕ್ಕಳಲ್ಲಿ ಗುರುಗಳ ಬಗ್ಗೆ ಗೌರವ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ನೈತಿಕ ಮೌಲ್ಯಗಳನ್ನು ಸಹ ಹೇಳಿಕೊಡಲಾಗುತ್ತಿದೆ. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ಬಿ.ಜಿ. ಶೆಟಕಾರ್, ಸದಸ್ಯರಾದ ಶಿವಶರಣಪ್ಪ ಸಾವಳಗಿ, ಪ್ರಭುಶೆಟ್ಟಿ ಮುದ್ದಾ, ಮಡಿವಾಳಪ್ಪ ಗಂಗಶೆಟ್ಟಿ, ಉದಯಭಾನು ಹಲವಾಯಿ, ಈಶ್ವರಗೌಡ ಕಮಡಳ್ಳಿ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಅಂಗ ಸಂಸ್ಥೆಗಳ ಮುಖ್ಯಸ್ಥರಾದ ನಾಗಪ್ಪ ಜಾನಕನೋರ, ಡಾ. ಚಂದ್ರಕಾಂತ ಹಳ್ಳಿ, ಡಾ. ಚಂದ್ರಪ್ಪ ಭತಮುರ್ಗೆ, ಲಕ್ಷ್ಮಣ ಎಂ. ಪೂಜಾರಿ, ಬಸವರಾಜ ಮ್ಯಾಗೇರಿ, ಎಸ್.ಎಂ. ಐನಾಪುರ ಇದ್ದರು. ಪ್ರಾಚಾರ್ಯ ಶಿವಕುಮಾರ ರಾಮಚಂದ್ರನ್ ಸ್ವಾಗತಿಸಿದರು. ಶಾಲಾ ಮಕ್ಕಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮ ಗಮನ ಸೆಳೆದವು.