ಔರಾದ್: ಸಮಾಜದಲ್ಲಿದ್ದ ಅಂಕು-ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಹೇಳಿದರು.
ತಾಲೂಕು ಆಡಳಿತ ಹಾಗೂ ಭೋವಿ ಸಮಾಜ ಸಂಘದ ಸಹಯೋಗದಡಿ ತಹಸಿಲ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಜಯಂತ್ಯುತ್ಸವದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಸಿದ್ಧರಾಮೇಶ್ವರರು ಜನರನ್ನು ಎಚ್ಚರಿಸಿ ಸಮಾಜ ಸುಧಾರಣೆ ಕೆಲಸ ಮಾಡಿದ್ದಾರೆ ಎಂದರು.
ಉಪ ಖಜಾನೆ ಅಧಿಕಾರಿ ಮಾಣಿಕ ನೇಳಗೆ ವಿಶೇಷ ಉಪನ್ಯಾಸ ನೀಡಿ, ಬಸವಣ್ಣ, ಅಲ್ಲಮಪ್ರಭುಗಳ ಜತೆ ಸಿದ್ಧರಾಮೇಶ್ವರರು ಸಮಾನತೆ ಸಮಾಜ ನಿರ್ಮಿಸಲು ಶ್ರಮಿಸಿದ್ದಾರೆ. ಶಿವಯೋಗಿಗಳ ಜಯಂತಿಯನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಇಡೀ ಸಮಾಜಕ್ಕೆ ಅವರ ಕೊಡುಗೆ ಮಾದರಿಯಾಗಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ವಾಮಿದಾಸ, ಲೋಕೋಪಯೋಗಿ ಇಲಾಖೆ ಅಧಿಕಾರಿ ವೀರಶೆಟ್ಟಿ ರಾಠೋಡ್, ತಾಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿ, ಉಪನೋಂದಣಾಧಿಕಾರಿ ಪ್ರೇಮಿಬಾಯಿ, ಸಮಾಜ ಕಲ್ಯಾಣ ಅಧಿಕಾರಿ ಅನೀಲಕುಮಾರ, ನಾಗನಾಥ, ವೈಜಿನಾಥ ವಡೆಯರ್, ಸಂಜು ವಡೆಯರ್, ಡಾ.ಫಯಾಜ್, ಚಂದ್ರಕಾಂತ ನಿರ್ಮಳೆ, ದಯಾನಂದ ಘುಳೆ, ಅಂಜಾರಡ್ಡಿ, ಅನೀಲ ವಡೆಯರ್, ಗುರುನಾಥ, ವಿಜಯಕುಮಾರ, ಪ್ರಶಾಂತ ಇತರರಿದ್ದರು. ಇದಕ್ಕೂ ಮುನ್ನ ಪಟ್ಟಣದ ಬಸವೇಶ್ವರ ವೃತ್ತದಿಂದ ಮಿನಿ ವಿಧಾನಸೌಧವರೆಗೆ ಭವ್ಯ ಮೆರವಣಿಗೆ ನಡೆಯಿತು.