ಜಿಲ್ಲೆ

ಕೃಷಿ ಕಾಯಕದಿಂದ ನೆಮ್ಮದಿ ಬದುಕು

ರೇವಣಸಿದ್ದಪ್ಪ ಪಾಟೀಲ್

ಬೀದರ್: ನೆಮ್ಮದಿ ಮತ್ತು ಸುಖದ ಬದುಕಿಗಾಗಿ ಕೃಷಿ ಕಾಯಕ ಮಾಡಬೇಕು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಡಾ.ಸುರೇಶ ಪಾಟೀಲ್ ಹೇಳಿದರು.
ವಚನ ಚಾರಿಟೇಬಲ್ ಸೊಸೈಟಿ ನಗರದಲ್ಲಿ ಆಯೋಜಿಸಿದ್ದ ಒಕ್ಕಲಿಗ ಮುದ್ದಣ್ಣ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಕೃಷಿ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡುವುದು ಅನಿವಾರ್ಯ. ಕೃಷಿ ಬೆಳವಣಿಗೆಯಾಗದ ಹೊರತು ದೇಶದ ಅಭಿವೃದ್ಧಿ ಆಗಲಾರದು. ಕೃಷಿ ಕಾಯಕ ಮೊದಲು, ನಂತರ ಇತರ ಕ್ಷೇತ್ರಗಳು ಎಂದರು.
12ನೇ ಶತಮಾನದ ಶರಣ ಮುದ್ದಣ್ಣ ಕೃಷಿ ಕಾಯಕಕ್ಕೆ ಮೊದಲ ಆದ್ಯತೆ ನೀಡಿದ್ದರು. ಹೀಗಾಗಿ ಒಕ್ಕಲಿಗ ಮುದ್ದಣ್ಣ ಎಂಬ ಹೆಸರು ಬಂದಿದೆ. ಶರಣರು ಕಾಯಕಕ್ಕೆ ಎಲ್ಲಿಲ್ಲದ ಮಹತ್ವ ನೀಡಿ ಕಾಯಕವೇ ಕೈಲಾಸ ಎಂಬ ತತ್ವ ಕೊಟ್ಟಿದ್ದಾರೆ. ಮುದ್ದಣ್ಣನವರು ಹಲವಾರು ವಚನಗಳು ರಚಿಸಿದ್ದಾರೆ ಎಂದು ಬಣ್ಣಿಸಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಮಲ್ಲಿಕಾರ್ಜುನ ನಿಂಗದಳ್ಳಿ ಮಾತನಾಡಿ, ಒಕ್ಕಲಿಗ ಮುದ್ದಣ್ಣ ವಿಜಯಪುರ ಜಿಲ್ಲೆಯ ಜೋಳದ ಹಾಳಿ ಗ್ರಾಮದವರು. ಕೃಷಿ ಕಾಯಕದೊಂದಿಗೆ ಕಾಮ-ಭೀಮ ಎಂಬ ವಚನಾಂಕಿತದಿಂದ ವಚನಗಳನ್ನು ರಚಿಸಿದ್ದಾರೆ. ವೈಚಾರಿಕ ನೆಲೆಗಟ್ಟಿನವರಾದ ಮುದ್ದಣ್ಣ ನೇರ-ನಿಷ್ಠುರ ನಡೆಯುಳ್ಳವರಾಗಿದ್ದರು. ಬೆಳೆದ ಬೆಳೆಗೆ ರಾಜರಿಗೆ ಕರ ಕೊಡುವದು ಸಹಜ. ಅಧಿಕವಾಗಿ ಬೆಳೆದ ಬೆಳೆಗಳನ್ನು ಕರ ನಿರಾಕರಿಸಿ ದಾಸೋಹ ಮಾಡಿದ ಎದೆಗಾರಿಕೆಯ ಶರಣರಿವರು ಎಂದು ಹೇಳಿದರು.
ಸಾವಯವ ರೈತ ಭೀಮರಡ್ಡಿ ಮಾಣಿಕರಡ್ಡಿ ಕೊತ್ತ ಮಾತನಾಡಿ, ಇಂದು ಸಾವಯವ ಕೃಷಿ ಮಾಡುವುದು ಬಹಳ ಕಷ್ಟಕರ. ಒಂದೆಡೆ ಪರಿಸರ, ಇನ್ನೊಂದಡೆ ಮಾರುಕಟ್ಟೆ ಸಮಸ್ಯೆ ಇದೆ. ಆದರೂ ಸಾವಯವ ಕೃಷಿ ಕಾಯಕ ಶ್ರೇಷ್ಠ ಕಾರ್ಯ. ಇದರಿಂದ ಆರ್ಥಿಕವಾಗಿ ಸಮೃದ್ಧವಾಗದಿದ್ದರೂ ಕುಟುಂಬವನ್ನು ಸಂತೃಪ್ತಿಯಿಂದ ಮುನ್ನಡೆಸಬಹುದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಚನ ಚಾರಿಟೇಬಲ್ ಸೊಸೈಟಿ ಅಧ್ಯಕ್ಷೆ ಲಿಂಗಾರತಿ ಅಲ್ಲಮಪ್ರಭು ನಾವದಗೇರೆ ಮಾತನಾಡಿ, ಇಂದಿನ ಕಂಪ್ಯೂಟರ್ ಯುಗದಲ್ಲಿ ವೈಚಾರಿಕತೆ ನೆಲೆಯ ವಿಚಾರ ಹಂಚಿಕೊಂಡು ಸುಂದರ ಬದುಕು ಸಾಗಿಸಲು ಶರಣರ ಜಯಂತಿ ಆಚರಣೆ ಪ್ರಸ್ತುತ. ಸೊಸೈಟಿ ವತಿಯಿಂದ ಸಾಮಾಜಿಕ ಕೆಲಸಗಳ ಜತೆಗೆ ಶರಣರ ವಿಚಾರಗಳನ್ನು ಪ್ರಸಾರ, ಪ್ರಚಾರ ಮಾಡಲು ನಾನಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ವಿರೂಪಾಕ್ಷ ದೇವರು ಇತರರಿದ್ದರು. ಶಿವಶಂಕರ ಟೋಕರೆ ಪ್ರಾಸ್ತಾವಿಕ ಮಾತನಾಡಿದರು. ಶಂಕ್ರೆಪ್ಪ ಸಜ್ಜನಶೆಟ್ಟಿ ಸ್ವಾಗತಿಸಿದರು. ರೇವಣಪ್ಪ ಮೂಲಗೆ ನಿರೂಪಣೆ ಮಾಡಿದರು. ವೀರಪ್ಪ ಜೀರ್ಗೆ ವಂದಿಸಿದರು.