ಬೀದರ್: ಮಾನವ ಉತ್ಥಾನ ಸಮಿತಿ ವತಿಯಿಂದ ಸತ್ಸಂಗ ಕಾರ್ಯಕ್ರಮ ನಿಮಿತ್ತ ನಗರದಲ್ಲಿ ಶನಿವಾರ ಸತ್‍ಪಾಲ್‍ಜಿ ಮಹಾರಾಜರ ಭಾವಚಿತ್ರದ ಶೋಭಾಯಾತ್ರೆ ನಡೆಯಿತು.
ತೋರಣ ಕಾಲೊನಿಯಿಂದ ಆರಂಭವಾದ ಯಾತ್ರೆ ಚಿಟ್ಟಾ ಕ್ರಾಸ್, ಮೈಲೂರ ಕ್ರಾಸ್, ಬೊಮ್ಮಗೊಂಡೇಶ್ವರ ವೃತ್ತ, ಭಗತ್‍ಸಿಂಗ್ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ರೋಟರಿ ಕನ್ನಡಾಂಬೆ ವೃತ್ತದ ಮಾರ್ಗವಾಗಿ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರಕ್ಕೆ ತಲುಪಿ ಸಮಾರೋಪಗೊಂಡಿತು.
ಯಾತ್ರೆ ಮಾರ್ಗದಲ್ಲಿ ಭಕ್ತರು ಸತ್‍ಪಾಲ್‍ಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದ ನೆಲೆಗೊಳಿಸುವುದು ಮಾನವ ಉತ್ಥಾನ ಸಮಿತಿಯ ಉದ್ದೇಶವಾಗಿದೆ ಎಂದು ಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೂನಿಶಾನಂದ ಸ್ವಾಮೀಜಿ ಹೇಳಿದರು.
ಸತ್‍ಪಾಲ್‍ಜಿ ಮಹಾರಾಜರು ಭಾರತ ಸೇರಿದಂತೆ ವಿಶ್ವದಾದ್ಯಂತ ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.
ಭಾನುವಾರ ಮಧ್ಯಾಹ್ನ 3 ರಿಂದ ಸಂಜೆ 6 ರ ವರೆಗೆ ರಂಗ ಮಂದಿರದಲ್ಲಿ ನಡೆಯಲಿರುವ ಸತ್ಸಂಗದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ಯಾತ್ರೆಗೆ ಚಾಲನೆ ನೀಡಿದರು. ಗೋವಿಂದ ಸ್ವಾಮೀಜಿ, ಸಮಿತಿಯ ಬೀದರ್ ಘಟಕದ ಗೌರವಾಧ್ಯಕ್ಷ ಎನ್.ಆರ್. ವರ್ಮಾ, ಪ್ರಧಾನ ಕಾರ್ಯದರ್ಶಿ ಸುನೀಲ್ ಗೌಳಿ, ಹಣಮಂತ ಬುಳ್ಳಾ ಮೊದಲಾದವರು ಪಾಲ್ಗೊಂಡಿದ್ದರು.