ಜಿಲ್ಲೆ

ಶಿಕ್ಷಣ ಸರ್ಕಾರಿ ನೌಕರಿಗಾಗಿ ಅಲ್ಲ

ರೇವಣಸಿದ್ದಪ್ಪ ಪಾಟೀಲ್

ಹುಲಸೂರು: ಶಿಕ್ಷಣ ನೌಕರಿಗಾಗಿಯೇ ಅಲ್ಲ. ಶಿಕ್ಷಣದ ಉದ್ದೇಶ ಜ್ಞಾನಾರ್ಜನೆ ಜತೆಗೆ ವ್ಯಕ್ತಿತ್ವ ವಿಕಸನ ಮಾಡುವುದಾಗಿದೆ ಎಂದು ತಹಸೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು.
ಗಡಿಗೌಂಡಗಾಂವ ಗ್ರಾಮದಲ್ಲಿ ಎಳ್ಳಮಾವಾಸ್ಯೆ ನಿಮಿತ್ತ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ ಇಂದಿನ ಶಿಕ್ಷಣದ ಬಿಕ್ಕಟ್ಟುಗಳು ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಅವರು, ಇಂದಿನ ದಿನಗಳಲ್ಲಿ ಶಿಕ್ಷಣ ಪಡೆಯುವುದೇ ಸರ್ಕಾರಿ ನೌಕರಿ ಹಿಡಿಯಲು ಎಂಬುದು ಹಲವಾರು ವಿದ್ಯಾರ್ಥಿಗಳ ಮನೋಭಾವವಾಗಿದೆ. ಇದು ಹೋಗಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ ಸಿಕ್ಕರೆ ಸಾಮಾಜಿಕ ಬಿಕ್ಕಟ್ಟುಗಳಿಂದ ಪಾರಾಗಬಹುದು ಎಂದರು.
ಅಕ್ಷರವಂಚಿತ ಸಮುದಾಯಗಳಿಗೆ 12ನೇ ಶತಮಾನದಲ್ಲಿ ಬಸವಣ್ಣನವರು ಶಿಕ್ಷಣದ ಮಹತ್ವ ತಿಳಿಸಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಸಾರ್ವತ್ರಿಕ ಶಿಕ್ಷಣ ಜಾರಿಗೆ ತಂದರು. ಇದು ಶಿಕ್ಷಣಕ್ಕಾಗಿ ಸಾಮಾಜಿಕ ಬಿಕ್ಕಟ್ಟು ನೀಗಿಸಿತು. ಸಾರ್ವತ್ರಿಕ ಶಿಕ್ಷಣದಿಂದ ಆರ್ಥಿಕವಾಗಿ ದುರ್ಬಲರಿದ್ದವರಿಗೆ ವಿದ್ಯೆ ತಲುಪಿತು ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಅಧ್ಯಕ್ಷತೆ ವಹಿಸಿದ್ದರು. ಬಸವಕಲ್ಯಾಣ ತಾಂತ್ರಿಕ ಕಾಲೇಜಿನ ಪ್ರೇಮಸಾಗರ ಪಾಟೀಲ್, ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ, ಶ್ರೀನಿವಾಸ ಉಮಾಪುರೆ, ಡಾ.ಭೀಮಾಶಂಕರ ಬಿರಾದಾರ ಮಾತನಾಡಿದರು.
ಪ್ರಮುಖರಾದ ಹುಲೆಪ್ಪ ಮಹಾಜನ್, ಧೂಳಪ್ಪ ಭರಮಶಟ್ಟೆ, ಜಗನ್ನಾಥ ಖ್ಯಾಡೆ, ಡಾ.ಶಿವಾಜಿ ಮೇತ್ರೆ, ಬಸವರಾಜ ಬಿರಾದಾರ ಖಂಡಾಳ, ಲಿಂಗರಾಜ ಜಡಗೆ, ಸತೀಶ್ ಹಿರೇಮಠ, ದಯಾನಂದ ಭರಮಶಟ್ಟೆ, ಕಂಟೆಪ್ಪ ಮೇತ್ರೆ, ಬಸವಕುಮಾರ ಕೌಟೆ, ಸೂರ್ಯಕಾಂತ ಪಸರಗೆ ಇತರರಿದ್ದರು. ಪ್ರತಿಷ್ಠಾನ ಕಾರ್ಯದರ್ಶಿ ದೇವೇಂದ್ರ ಬರಗಾಲೆ ಸ್ವಾಗತಿಸಿದರು. ಗಂಗಾಧರ ಸಾಲಿಮಠ ನಿರೂಪಣೆ ಮಾಡಿದರು. ಪ್ರಶಾಂತ ಬುಡಗೆ ವಂದಿಸಿದರು.