ಚಿಟಗುಪ್ಪ: ಮಂಗಲಗಿ ಗ್ರಾಮದಲ್ಲಿ ಎಲ್ ಆ್ಯಂಡ್ ಟಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಲಿಮಿಟೆಡ್ (ಐಡಿಪಿಎಲ್) ಕಂಪನಿಯಿಂದ ಎರಡು ಕಡೆ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಹನುಮಾನ ಮಂದಿರ ಹತ್ತಿರ ಹಾಗೂ ಐಬಿ ಕಾಲನಿಯಲ್ಲಿ ಹೈಮಾಸ್ಟ್ ದೀಪಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಎಲ್ ಆ್ಯಂಡ್ ಟಿ ಕಂಪನಿ ಆಪರೇಷನ್ ಮ್ಯಾನೇಜರ್ ವಿಜೇಂದ್ರರಡ್ಡಿ ಮಾತನಾಡಿ, ಸಂಸ್ಥೆಯು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ 8 ಲಕ್ಷ ರೂ. ವೆಚ್ಚದಲ್ಲಿ ಎರಡು ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ಪ್ರತಿವರ್ಷ ಕಂಪನಿಯು ವಿವಿಧೆಡೆ ಸಾಮಾಜಿಕ ಕೆಲಸ ಮಾಡುತ್ತಿದ್ದು, ಇದನ್ನು ಮುಂದುವರಿಸುವುದಾಗಿ ತಿಳಿಸಿದರು.
ಟೋಲ್ ಪ್ಲಾಜಾ ವ್ಯವಸ್ಥಾಪಕ ಸೋಮನಾಥ ಶಾಸಿ ಮಾತನಾಡಿ, ಜನಪರ ಕಾಳಜಿಯೊಂದಿಗೆ ನಮ್ಮ ಸಂಸ್ಥೆ ಉತ್ತಮ ಸೇವೆಗೆ ಹೆಸರು ಪಡೆದಿದೆ. ಗ್ರಾಮೀಣ ಜನರ ಅವಶ್ಯಕತೆಯನ್ನು ಅರಿತು ಜನರ ಸುರಕ್ಷತೆ ದೃಷ್ಟಿಯಿಂದ ಹೈಮಾಸ್ಟ್ ಲೈಟ್ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದರು.
ಪ್ರಮುಖರಾದ ಕೋಟೇಶ್ವರರಾವ, ರಾಮಕೃಷ್ಣ ಜಾಮಿ, ರೇವಣಸಿದ್ದಪ್ಪ ವಾಲಿ, ಶಿವರಾಜ ಇತರರಿದ್ದರು.