ಹುಲಸೂರು: ವಿಶ್ವಗುರು ಬಸವಣ್ಣನವರ ಧರ್ಮಪತ್ನಿ ನೀಲಾಂಬಿಕೆ ಅವರನ್ನು ಶ್ರೀ ಘನಲಿಂಗ ರುದ್ರಮುನಿ ಲಿಂಗ ದೀಕ್ಷೆ ಕೊಟ್ಟಿದ್ದಾರೆ ಎಂಬುದನ್ನು ಲೇಖಕ ವೀರಶೆಟ್ಟಿ ಎಂ.ಪಾಟೀಲ್ ಮತ್ತು ಪ್ರಕಾಶಕರಾದ ಬಸವಕಲ್ಯಾಣದ ಶ್ರೀಗುರು ಘನಲಿಂಗ ರುದ್ರಮುನಿ ಗವಿಮಠದ ಪುಸ್ತಕದಲ್ಲಿ ಬರೆದಿರುವುದು ಶುದ್ಧ ಸುಳ್ಳು ಎಂದು ಬೇಲೂರಿನ ವಿರಕ್ತ ಮಠದ ಶ್ರೀ ಶಿವಬಸವ ಸ್ವಾಮೀಜಿ ಹೇಳಿದರು.
ಲೇಖಕರು ಇಲ್ಲಿ ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ. ಪ್ರಕಾಶಕರಾದ ಗವಿಮಠ ಇನ್ಮುಂದೆ ಬಸವಾದಿ ಶಿವಶರಣರ ಇತಿಹಾಸದ ಮೇಲೆ ಪಂಚಾಚಾರ್ಯರು ಸವಾರಿ ಮಾಡುವುದನ್ನು ನಿಲ್ಲಿಸಬೇಕು ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ನೀಲಾಂಬಿಕೆ ಅವರಿಗೆ ಘನಲಿಂಗ ರುದ್ರಮುನಿ ಪೂಜ್ಯರು ಲಿಂಗದೀಕ್ಷೆ ನೀಡಿದ್ದು ಸತ್ಯವಾದರೆ ನಮ್ಮ ಮಠದ ವತಿಯಿಂದ ಒಂದು ಲಕ್ಷ ರೂ.ಬಹುಮಾನ ನೀಡಲಾಗುವುದು. ಇದರ ಬಗ್ಗೆ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ.
ಈ ವಿಷಯಕ್ಕೆ ಸಂಬಂಸಿದಂತೆ ಲೇಖಕ ವೀರಶೆಟ್ಟಿ ಪಾಟೀಲ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದು, ವೀರಣ್ಣ ದಂಡೆ ಬರೆದ 12ನೇ ಶತಮಾನದ ಶರಣರ ಸ್ಮಾರಕಗಳು ಬಸವಕಲ್ಯಾಣದಿಂದ ಕೂಡಲಸಂಗಮದವರೆಗೆ ಎಂಬ ಗ್ರಂಥದಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ. ಅದರ ಆಧಾರದ ಮೇಲೆ ಬರೆದಿರುವೆ ಎಂದು ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.