ಜಿಲ್ಲೆ

ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ

ರೇವಣಸಿದ್ದಪ್ಪ ಪಾಟೀಲ್

ಔರಾದ್: ಭಾರತೀಯ ಸೇನೆಯಲ್ಲಿ ಸುದೀರ್ಘ 34 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮ ಮುಂಗನಾಳಕ್ಕೆ ಆಗಮಿಸಿದ ವೀರಯೋಧ ಮಾಧವ ಯಶವಂತರಾವ ಪೀಪಲಪಲ್ಲೆ ಅವರನ್ನು ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
1990ರಲ್ಲಿ ದೇಶ ಸೇವೆಗೆ ಸೇರಿದ ಮಾಧವ ಅವರು ಬೆಂಗಳೂರಿನಲ್ಲಿ ತರಬೇತಿ ಪಡೆದು ನಾಗಾಲ್ಯಾಂಡ್, ಲಡಾಖ್, ಹರಿಯಾಣ, ಝಾನ್ಸಿ, ಜಮ್ಮು ಕಾಶ್ಮೀರ, ಬಾರಾಮುಲ್ಲಾ, ಕಾರ್ಗಿಲ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ವಿವಿಧ ಯುದ್ಧಗಳಲ್ಲೂ ಭಾಗಿಯಾಗಿ ಧೈರ್ಯದಿಂದ ಹೋರಾಡಿದ್ದಾರೆ.
ನಿವೃತ್ತಿ ಪಡೆದು ಊರಿಗೆ ಮರಳಿದ ಅವರನ್ನು ಔರಾದ್ ಪಟ್ಟಣದಲ್ಲಿ ಸ್ವಾಗತಿಸಿದ ಬಳಿಕ ಮುಂಗನಾಳವರೆಗೆ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ನಂತರ ಏರ್ಪಡಿಸಿದ್ದ ಸಮಾರಂಭದಲ್ಲಿ ಯೋಧನನ್ನು ಸನ್ಮಾನಿಸಿದ ಗ್ರಾಮಸ್ಥರು, ದೇಶದ ಜನರ ಸುರಕ್ಷತೆಗಾಗಿ ಪ್ರಾಣವನ್ನು ಒತ್ತೆಯಿಟ್ಟು ಗಡಿಯಲ್ಲಿ ಕಾಯುವ ಯೋಧರ ಸೇವೆಗೆ ಸರಿಸಾಟಿ ಯಾವುದೂ ಇಲ್ಲ. ಅಂಥವರನ್ನು ಸನ್ಮಾನಿಸುವುದು ನಾವು ತೋರಿಸುವ ಅಳಿಲು ಸೇವೆ ಎಂದು ಹೇಳಿದರು.
ಪ್ರಮುಖರಾದ ಶಿವಾಜಿರಾವ ಪಾಟೀಲ್, ವಿನಾಯಕ ಜಗದಾಳೆ, ಖಂಡೇರಾವ, ರಾಮರಾವ ಪಾಟೀಲ್, ಪಾಂಡು ಇಂಗಳೆ, ದಿಲೀಪ ಜಾನಾಪುರೆ, ದಯಾನಂದ ನವಾಡೆ, ಕೇರಬಾ ಪವಾರ್, ಸಂಜು ಜಡಗೆ, ಗೋವಿಂದ ಇಂಗಳೆ, ಶಿವಾಜಿ ಸಾದಗೀರೆ, ಅಂಕುಶ ಪೀಪಲಪಲ್ಲೆ, ಧನಾಜಿ ಸಾವಳೆ, ಸುರೇಂದ್ರ ಗೊಗ್ಗಾ, ಪಂಢರಿನಾಥ ವಾಗೆ, ಶಿವಾಜಿ ಜಗದಾಳೆ ಇತರರಿದ್ದರು.