ಬೀದರ್: ಕರ್ನಾಟಕ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ನೌಬಾದ್ ಹತ್ತಿರವಿರುವ ಬೀದರ್ ರಬ್ಬರ್ ಕಾರ್ಖಾನೆ ಎದುರು ಸುಸಜ್ಜಿತವಾಗಿ ನಿರ್ಮಿಸುತ್ತಿರುವ ಸಮುದಾಯ ಭವನ ಕಾಮಗಾರಿ ಆರೇಳು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಹೇಳಿದರು.
ನಗರದ ಜೆಸ್ಕಾಂ ಸಮೀಪದ ಸಂಘದ ಜಿಲ್ಲಾ ಕಚೇರಿಯಲ್ಲಿ ರಾಜ್ಯ ಘಟಕ ಹೊರತಂದ 2024ನೇ ಸಾಲಿನ ವರ್ಣರಂಜಿತ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, 2 ಕೋಟಿ ರೂ. ವೆಚ್ಚದಲ್ಲಿ ಸಂéಘವು ನಮ್ಮ ಭಾಗದಲ್ಲಿ ಮಾದರಿ ಭವನ ಕಟ್ಟುತ್ತಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ಜಿ ಪ್ಲಸ್ ತ್ರಿನಲ್ಲಿ ಡೈನಿಂಗ್, ಫಂಕ್ಶನ್ ಹಾಲ್ ಜತೆಗೆ ಎರಡ್ಮೂರು ಅತಿಥಿ ಕೋಣೆಗಳು ಸಹ ಇರಲಿವೆ. ಸಂಘದ ಸದಸ್ಯರು, ಕುಟುಂಬದವರು, ಸಂಬಂಕರ ಜತೆಗೆ ಇತರರಿಗೂ ಕಾರ್ಯಕ್ರಮ ನಡೆಸಲು ಇದು ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಂಘವು ಈಗಾಗಲೇ ಶತಮಾನೋತ್ಸವ ಆಚರಿಸಿದೆ. ನೂರು ವರ್ಷಗಳಿಂದ ವಿದ್ಯುತ್ ಗುತ್ತಿಗೆದಾರರ ಹಿತ ಕಾಪಾಡುವ ಜತೆಯಲ್ಲೇ ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಕೆಲಸಗಳು ಸಮರ್ಪಕವಾಗಿ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 15 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಸಂಘ ಹೊಂದಿದೆ. ರಾಜ್ಯಾಧ್ಯಕ್ಷ ಸಿ.ರಮೇಶ್ ಅವರ ನೇತೃತ್ವದಲ್ಲಿ ಅನೇಕ ಜನಪರ ಕೆಲಸ ಸಹ ಸಂಘ ಹಾಕಿಕೊಂಡಿದೆ ಎಂದರು.
ಸಂಘದ ಉಪಾಧ್ಯಕ್ಷ ಝರೆಪ್ಪ ಬೌದ್ಧೆ, ಸಂಘಟನಾ ಕಾರ್ಯದರ್ಶಿ ಶರಣಪ್ಪ ಚತುರೆ, ಸಹ ಕಾರ್ಯದರ್ಶಿ ರಾಜಕುಮಾರ ಪಾಟೀಲ್, ಕಾರ್ಯದರ್ಶಿ ಸಲಾವುದ್ದಿನ್, ಖಜಾಂಚಿ ಎಂ.ಡಿ. ಖವಿ, ಪ್ರಮುಖರಾದ ವಿಜಯಕುಮಾರ ಪಾಟೀಲ್, ಗುಂಡಪ್ಪ ಕಂಟೆ, ಸಂತೋಷ ಪಾಟೀಲ್ ಸಪ್ನಾ, ಸುಭಾಷ ಸಾವಳೆ, ಮಲ್ಲಿಕಾರ್ಜುನ ಪಾಟೀಲ್, ಎಂ.ಎ.ಮುಕ್ತಾರ್ ಇತರರಿದ್ದರು.