ಬೀದರ್: ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನಡೆದ ವಿಶೇಷ ಚೇತನ ಕಲಾವಿದರ ರಾಜ್ಯಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ಕಲಾವಿದರ ಪ್ರತಿಭೆ ಅನಾವರಣಗೊಂಡಿತು.
ವಿಶೇಷ ಚೇತನ ಕಲಾವಿದರು ತಬಲಾ ಸೋಲೊ, ಕೊಳಲು ವಾದನ, ಸುಗಮ ಸಂಗೀತ, ದಾಸರ ಪದ, ಭಾವ ಗೀತೆ, ವಚನ ಗಾಯನ, ಭಕ್ತಿ ಗೀತೆ ಹಾಗೂ ಜಾನಪದ ಗೀತೆಗಳನ್ನು ಸುಮಧುರವಾಗಿ ಹಾಡಿ ಸಭಿಕರ ಮನ ತಣಿಸಿದರು.
ಕಲಾವಿದರಾದ ಸ್ವಪ್ನ ನಾಯಕ್, ಮಂಜುನಾಥ ಭಟ್, ವೀರೇಶ ಹಿರೇಮಠ, ಸುಲೋಚನಾ, ತಾಜೊದ್ದಿನ್, ಬಸವರಾಜ ಮುಸ್ತಫಾ, ಭಾಗ್ಯಶ್ರೀ, ಲೋಕನಾಥ ಚಾಂಗಲೇರಾ, ಏಕನಾಥ, ತುಕಾರಾಮ, ನಾಗೇಶ, ಜಾನ್ಸನ್, ಸಂಜುಕುಮಾರ, ಗೀತಾ ಪಾಟೀಲ, ರಮೇಶ, ಬಸಪ್ಪ ಅವರು ತಮ್ಮ ಕಲೆ ಪ್ರದರ್ಶಿಸಿದರು.
ಕಲೆ ಉಳಿವಿಗೆ ಶ್ರಮ: ಜೀವನ ಪ್ರಕಾಶ ಸೊಸೈಟಿಯು ಸಂಗೀತ ಸೇರಿದಂತೆ ವಿವಿಧ ಕಲೆಗಳನ್ನು ಉಳಿಸಲು ಶ್ರಮಿಸುತ್ತಿದೆ ಎಂದು ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಹೇಳಿದರು.
ಸೊಸೈಟಿ ಅಧ್ಯಕ್ಷ ದಿಲೀಪ್ ಕಾಡವಾದ ವಿಶೇಷ ಚೇತನರಾದರೂ, ಯಾವುದರಲ್ಲೂ ಕಡಿಮೆ ಇಲ್ಲ. ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯ ಅವರ ಛಲ ಹಾಗೂ ಉತ್ಸಾಹ ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಕಲೆ ಬೆಳವಣಿಗೆಯಲ್ಲಿ ವಿಶೇಷ ಚೇತನರ ಪಾತ್ರ ಬಹಳ ಮಹತ್ವದ್ದಾಗಿದೆ. ವಿಶೇಷ ಚೇತನ ಕಲಾವಿದರಿಗೆ ವೇದಿಕೆ ಒದಗಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಅವರ ಬೆಳವಣಿಗೆಗೆ ಸಹಕರಿಸಬೇಕು ಎಂದು ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಹೇಳಿದರು.
ವಿಶೇಷ ಚೇತನರ ಬಗ್ಗೆ ಅನುಕಂಪ ವ್ಯಕ್ತಪಡಿಸುವುದಕ್ಕಿಂತ ಅವರಿಗೆ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು
ಕೆಥೊಲಿಕ್ ಚರ್ಚ್‍ನ ಫಾದರ್ ವಿಲ್ಸನ್ ಫರ್ನಾಂಡೀಸ್ ನುಡಿದರು.
ಸೊಸೈಟಿಯು ಜಿಲ್ಲೆಯಲ್ಲಿ ಎರಡು ದಶಕಗಳಿಂದ ಕಲೆ, ಸಾಹಿತ್ಯ, ಸಂಸ್ಕøತಿ ಹಾಗೂ ಸಮಾಜ ಸೇವಾ ಚಟುವಟಿಕೆಗಳಲ್ಲಿ ನಿರತವಾಗಿದೆ. ಕಲಾವಿದರಿಗೆ ಸರ್ಕಾರದ ಸೌಲಭ್ಯ ದೊರಕಿಸಿಕೊಡಲು ಪ್ರಯತ್ನಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ನೂರಾರು ಜನರಿಗೆ ಆಹಾರಧಾನ್ಯ ಕಿಟ್ ವಿತರಿಸಿ ನೆರವಾಗಿದೆ ಎಂದು ಸೊಸೈಟಿ ಕಾರ್ಯದರ್ಶಿ ಏಸ್ತೇರ್ ಡಿ. ಕಾಡವಾದ ತಿಳಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿದರು.
ಜೀವನ ಪ್ರಕಾಶ ಕಲ್ಚರಲ್ ಆ್ಯಂಡ್ ವೆಲ್‍ಫೇರ್ ಸೊಸೈಟಿ ಅಧ್ಯಕ್ಷ ದಿಲೀಪ್ ಕಾಡವಾದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಗರಾಜ ಮಠ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಪ್ರಮುಖರಾದ ಜಸ್‍ಪ್ರೀತ್‍ಸಿಂಗ್ ಮೌಂಟಿ, ಮಾಧವರಾವ್, ಸುಧಾಕರ ಕರ್ಕರೆ, ಸಂಜುಕುಮಾರ ಭುಸ್ಸಾ, ಶಂಭುಲಿಂಗ ವಾಲ್ದೊಡ್ಡಿ, ರೇಖಾ ಅಪ್ಪಾರಾವ್ ಸೌದಿ, ಸ್ವಾಮಿದಾಸ ನಾಗೂರೆ, ಡಾ. ವಿಶ್ವನಾಥ ನಿಂಬೂರೆ, ಡಾ. ಮಲ್ಲಿಕಾರ್ಜುನ ಚಟ್ನಳ್ಳಿ, ತಾಜೊದ್ದಿನ್ ಮರ್ಜಾಪುರ ಇದ್ದರು.
ಜೆಸ್ಸಿ ಸೋನವಾನೆ ಸ್ವಾಗತಿಸಿದರು. ದೇವಿದಾಸ ಜೋಶಿ, ಸುನಿತಾ ಸಿ.ಬಿ. ನಿರೂಪಿಸಿದರು. ಸೈಮನ್ ಸೂರ್ಯವಂಶಿ ವಂದಿಸಿದರು.
ಕಾಡವಾದದ ಜೀವನ ಪ್ರಕಾಶ ಕಲ್ಚರಲ್ ಆ್ಯಂಡ್ ವೆಲ್‍ಫೇರ್ ಸೊಸೈಟಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.