ಭಾಲ್ಕಿ: ಗಡಿ ಜಿಲ್ಲೆ ಬೀದರ್ ಪ್ರಗತಿಯಲ್ಲಿ ಖಂಡ್ರೆ ಮನೆತನದ ಕೊಡುಗೆ ಅಪಾರ. ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಈ ಕುಟುಂಬ ಜಿಲ್ಲೆ ಜನರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಕೊಂಡಾಡಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಆಯೋಜಿಸಿದ್ದ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಾಗರ್ ಖಂಡ್ರೆ ಅವರ 26ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಲಿಂ.ಶ್ರೀ ಡಾ.ಚನ್ನಬಸವ ಪಟ್ಟದ್ದೇವರು, ಡಾ.ಭೀಮಣ್ಣ ಖಂಡ್ರೆ ಅವರು ಬ್ರಿಟಿಷರು ಮತ್ತು ನಿಜಾಮನ ವಿರುದ್ಧ ಹೋರಾಡಿ ಜಿಲ್ಲೆಯನ್ನು ಕನ್ನಡ ನೆಲದಲ್ಲಿ ಉಳಿಸಿದ್ದಾರೆ. ಅವರ ಹೋರಾಟ ಸ್ಮರಣೀಯ ಎಂದರು.
ಡಾ.ಭೀಮಣ್ಣ ಖಂಡ್ರೆ ತಮ್ಮ ಅಧಿಕಾರದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರಂತೆ ಪುತ್ರ ಈಶ್ವರ ಖಂಡ್ರೆ ಶಾಸಕ, ಮಂತ್ರಿಯಾಗಿ ಜಿಲ್ಲೆಯ ವಿಕಾಸಕ್ಕೆ ದುಡಿಯುತ್ತಿದ್ದಾರೆ. ಸಚಿವರ ಪುತ್ರ ಸಾಗರ್ ಖಂಡ್ರೆ ಸಹ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಜಿಲ್ಲೆಯ ಸರ್ವಾಂಗೀಣ ವಿಕಾಸದಲ್ಲಿ ಡಾ.ಭೀಮಣ್ಣ ಖಂಡ್ರೆ, ಈಶ್ವರ ಖಂಡ್ರೆ ಕೊಡುಗೆ ದೊಡ್ಡದಿದೆ. ಅದೇ ಪರಿವಾರದ ಸಾಗರ್ ಖಂಡ್ರೆ ಸಹ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಯುವಶಕ್ತಿ ಆನೆ ಶಕ್ತಿ ಇದ್ದಂತೆ. ಸಮಾಜಕ್ಕೆ ಯುವ ಸಮುದಾಯದ ಸದ್ಬಳಕೆಯಾಗಲಿ ಎಂದರು.
ಸಾಗರ್ ಖಂಡ್ರೆ ಮಾತನಾಡಿ, ಹಿರೇಮಠ ಸಂಸ್ಥಾನದ ಆಶೀರ್ವಾದ ಸದಾ ನಮ್ಮ ಮನೆತನದ ಮೇಲಿದೆ. ಕಷ್ಟ-ಸುಖಗಳಲ್ಲಿ ಪೂಜ್ಯರು ನಮ್ಮೊಂದಿಗೆ ನಿಂತಿದ್ದಾರೆ. ವಿವಿಧ ಸಾಮಾಜಿಕ ಕಾರ್ಯ ಮಾಡಲು ಶ್ರೀಗಳೇ ಆದರ್ಶ. ತಾತ ಮತ್ತು ತಂದೆಯವರ ದಾರಿಯಲ್ಲಿ ನಾನು ಸಾಮಾಜಿಕ ಕೆಲಸ ಮಾಡುತ್ತಿರುವೆ ಎಂದು ತಿಳಿಸಿದರು.
ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಪ್ರಮುಖರಾದ ಸಂಗಮೇಶ ಹುಣಜೆ, ರವೀಂದ್ರ ಚಿಡಗುಪ್ಪೆ, ರಾಜಕುಮಾರ ಬಿರಾದಾರ, ಸಂತೋಷ ಹಡಪದ ಇತರರಿದ್ದರು. ಬಾಬು ಬೆಲ್ದಾಳ ನಿರೂಪಣೆ ಮಾಡಿ ವಂದಿಸಿದರು. ಈ ವೇಳೆ ಗುರುಪ್ರಸಾದ ಶಾಲೆಯ 400ಕ್ಕೂ ಅಧಿಕ ಬಡ ಮಕ್ಕಳಿಗೆ ಸಾಗರ್ ಅವರು ನೋಟ್ ಬುಕ್, ಪೆನ್ ವಿತರಿಸಿದರು.