ಚಿಟಗುಪ್ಪ: ತಾಲೂಕಿನ ಮೀನಕೇರಾ ಗ್ರಾಮದ ದತ್ತ ಶಾಂತಿಧಾಮದ ದತ್ತ ಮಂದಿರದಲ್ಲಿ ದತ್ತ ಜಯಂತ್ಯುತ್ಸವ ನಿಮಿತ್ತ ವಿವಿಧ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ ಗ್ರಾಮದ ಹನುಮಾನ ಮಂದಿರದಿಂದ ಪ್ರಮುಖ ರಸ್ತೆಯ ಮೂಲಕ ಭವ್ಯ ಪಲ್ಲಕ್ಕಿ ಉತ್ಸವ ಸಡಗರ ಸಂಭ್ರಮದ ನಡುವೆ ಜರುಗಿತು. ಉತ್ಸವದಲ್ಲಿ ಪುರವಂತರ ಸೇವೆ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಕೋಲಾಟ, ಭಜನೆ ಸೇರಿ ಇತರ ಕಲಾ ತಂಡಗಳು ಪ್ರದರ್ಶನ ನೀಡಿದವು.
ಮಂದಿರದ ಪೀಠಾಧಿಪತಿ ಶ್ರೀ ವಿಶ್ವನಾಥ ಗುರೂಜಿ ಅವರು ದತ್ತ ಜಯಂತಿ ಕಾರ್ಯಕ್ರಮದ ವಿಶೇಷ ಪ್ರವಚನ ನೀಡಿದರು. ಪುರೋಹಿತರಾದ ಪ್ರವೀಣ ಜೋಶಿ, ಸಂಜು ಜೋಶಿ, ಅಚ್ಯುತ್ ಜೋಶಿ, ಶಿವಕುಮಾರ ಜೋಶಿ ಅವರ ವೈದಿಕ ಋತ್ವಿಜರ ತಂಡದಿಂದ ಹೋಮಹವನ ಸೇರಿ ನಾನಾ ಅಧ್ಯಾತ್ಮ ಕಾರ್ಯಕ್ರಮ ನಡೆದವು.
ಕಾರ್ಯಕ್ರಮದಲ್ಲಿ ಗುರೂಜಿ ಅವರನ್ನು ತುಲಾಭಾರ ನಡೆಯಿತು. ಮಂದಿರದ ಆರ್ಚಕ ಶಾಂತಯ್ಯ ಸ್ವಾಮಿ ಬಾಪುರ, ಸಂಗಯ್ಯ ಮಠಪತಿ ಇತರರಿದ್ದರು. ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.