ಜಿಲ್ಲೆ

ಸ್ವಾವಲಂಬಿ ಬದುಕು ಸಮಾಜಕ್ಕೆ ಮಾದರಿ

ರೇವಣಸಿದ್ದಪ್ಪ ಪಾಟೀಲ್

ಔರಾದ್: ನಮ್ಮಲ್ಲೇನೂ ಇಲ್ಲ, ನಮ್ಮ ಕಷ್ಟ ಎಂದಿಗೂ ಮುಗಿಯದು, ಸಮಸ್ಯೆಗೆ ಪರಿಹಾರ ಸಿಗದು ಎಂದು ಕೊರಗದೆ ಸ್ವಾವಲಂಬಿಗಳಾಗಿ ಬದುಕಿ ಸಮಾಜಕ್ಕೆ ಮಾದರಿಯಾಗಬೇಕು. ಈ ರೀತಿ ವಿದ್ಯಾರ್ಥಿಗಳನ್ನು ನಿರ್ಮಿಸಿ ಸಮಾಜಕ್ಕೆ ಕೊಡಬೇಕಾಗಿದೆ ಎಂದು ಹಿರೇಮಠ ವಿದ್ಯಾಪೀಠ ಸಂಸ್ಥಾಪಕರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲೂಕಿನ ಸಂತಪುರದಲ್ಲಿ ಸಿದ್ಧರಾಮೇಶ್ವರ ಪಿಯು ಕಾಲೇಜಿನ ದಶಮಾನೋತ್ಸವ ಸಂಭ್ರಮ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಮೂಢನಂಬಿಕೆಗಳಿಗೆ ಬಲಿಯಾಗಿ ಭವಿಷ್ಯ ಹಾಳು ಮಾಡಿಕೊಳ್ಳಬಾರದು. ಕಷ್ಟಪಟ್ಟಿ ಓದಿ ದೇಶದ ಸೇವೆ ಮಾಡಬೇಕು. ನಮ್ಮ ಜೀವನ ಮಾದರಿಯಾಗುವಂತೆ ಬದುಕಬೇಕು ಎಂದರು.
ಗ್ರಾಮೀಣ ಭಾಗದ ಮಕ್ಕಳ ಅನುಕೂಲಕ್ಕಾಗಿ ಒಂದು ದಶಕದ ಹಿಂದೆ ಇಲ್ಲಿ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜು ಆರಂಭಿಸಲಾಗಿತ್ತು. ಕಳೆದ ಐದು ವರ್ಷದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100ಕ್ಕೆ ನೂರರಷ್ಟು ಫಲಿತಾಂಶ ಬರುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಶಾಬಾದಕರ್ ಮಾತನಾಡಿ, ಸಂಸ್ಕಾರ ಜತೆಗೆ ಕಠಿಣ ಪರಿಶ್ರಮ, ಸಾಧನೆ ಮಾಡುವ ಛಲ ವಿದ್ಯಾರ್ಥಿಗಳಲ್ಲಿ ಇರಬೇಕು. ಸಿದ್ದರಾಮೇಶ್ವರ ಕಾಲೇಜು ಸಾಧನೆ ಅಮೋಘ ಎಂದು ಹೇಳಿದರು.
ಮಹಾರಾಷ್ಟ್ರ ಮತ್ತು ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಈ ಕಾಲೇಜು ಕೇವಲ 10 ವರ್ಷಗಳಲ್ಲಿಯೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ರಾಜ್ಯ ಮಟ್ಟದಲ್ಕಿ ಕೀರ್ತಿಗೆ ಪತಾಕೆ ಹಾರಿಸಿ, ಗಮನ ಸೆಳೆದಿದೆ ಎಂದು ಹೇಳಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಗಡಿ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಂತಪುರದಲ್ಲಿ ಸಿದ್ಧರಾಮೇಶ್ವರ ಕಾಲೇಜು ಆರಂಭಿಸಿದರು. ವಿದ್ಯಾರ್ಥಿಗಳ ಹಿತ, ನುರಿತ ಉಪನ್ಯಾಸಕರು, ಪರಿಣಾಮಕಾರಿ ಬೋಧನೆ ಫಲವಾಗಿ ಕಾಲೇಜು ದ್ವಿತೀಯ ಪಿಯು ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ ಹುಬ್ಬೇರಿಸುವಂಥ ಫಲಿತಾಂಶ ಪಡೆದು ಸಾಧನೆ ಮಾಡಿದೆ ಎಂದರು.
ಪೂಜ್ಯ ಝೌಪಾ ಮಹಾರಾಜ, ಪ್ರಮುಖರಾದ ಸೂರ್ಯಕಾಂತ ಅಲ್ಮಾಜೆ, ಅಖಿಲೇಶ ಬಿರಾದಾರ, ಡಾ.ಸಂಜುಕುಮಾರ ಜುಮ್ಮಾ, ಬಾಲಾಜಿ ಅಮರವಾಡಿ, ಮಹಾದೇವಿ ವಿಜಯಕುಮಾರ ಪಾಟೀಲ್, ಶಿವಕುಮಾರ ಮುಕ್ತೆದಾರ, ರಾಮಶೆಟ್ಟಿ ಪನ್ನಾಳೆ, ಆಡಳಿತಾಧಿಕಾರಿ ಮೋಹನರಡ್ಡಿ, ಪ್ರಕಾಶ ದೇಶಮುಖ, ಬಸವರಾಜ ಬಿರಾದಾರ, ಗುರಪ್ರಿತ್ ಕೌರ್, ಗಜಾನಂದ ಮುಂಗೆ ಇದ್ದರು. ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಸ್ವಾಗತಿಸಿದರು. ಕಲ್ಲಪ್ಪ ಬುಟ್ಟೆ ನಿರೂಪಣೆ ಮಾಡಿದರು. ಶಿವಕುಮಾರ ಹಿರೇಮಠ ವಂದಿಸಿದರು.