ಬೀದರ್: ಗಡಿ ನಾಡಿನಲ್ಲಿ ಕನ್ನಡದ ಜ್ಯೋತಿ ಬೆಳಗಿಸಿದ, ಹೊರಗಡೆ ಉರ್ದು ಬೋಡ್೯ ಹಾಕಿ ಒಳಗಡೆ ಕನ್ನಡ ಕಲಿಸಿದ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಸರ್ಕಾರ ಆಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಬಸವ ಬಳಗ ರಾಜ್ಯಾಧ್ಯಕ್ಷ ಬಾಬು ವಾಲಿ ಆಗ್ರಹಿಸಿದರು.
ನಗರದ ಕೆಪಿ ಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು 134ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ನಾಡು-ನುಡಿ ಸಂರಕ್ಷಣೆ ಜತೆಯಲ್ಲಿ ವಚನ ಸಾಹಿತ್ಯವನ್ನು ಪ್ರಸಾರ, ಪ್ರಚಾರ ಮಾಡಿದ್ದಾರೆ. ಸರ್ಕಾರ ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಆಧುನಿಕ ಅನುಭವ ಮಂಟಪ ಶಿಲ್ಪಿ ಪೂಜ್ಯರು. ಹೀಗಾಗಿ ಸರ್ಕಾರವೇ ಜಯಂತಿ ಆಚರಣೆಗೆ ಆದೇಶ ಹೊರಡಿಸಬೇಕು ಎಂದರು.
ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್ ಮಾತನಾಡಿ, ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ನಾಡು ಕಂಡಿರುವಂಥ ಶ್ರೇಷ್ಠ ಸಂತರು. ಶಿವಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆ ನಡೆದ ದಾರ್ಶನಿಕರಾಗಿದ್ದರು. ಮಠಾಧೀಶರು ಹೇಗಿರಬೇಕು ಎಂಬುದಕ್ಕೆ ಪಟ್ಟದ್ದೇವರು ಮಾದರಿ ಎಂದು ಬಣ್ಣಿಸಿದರು.
ಅನೇಕ ದಲಿತರಿಗೆ ಲಿಂಗದೀಕ್ಷೆ ನೀಡುವ ಮೂಲಕ ಸಮಾನತೆ ಸಾರಿದ ಲಿಂಗೈಕ್ಯ ಶ್ರೀಗಳು, ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ನಗರದಲ್ಲಿ ಅಕ್ಕಮಹಾದೇವಿ ಕಾಲೇಜು ಆರಂಭಿಸಿದ್ದರು. ಪೂಜ್ಯರು ಸಾಮಾಜಿಕ, ಶೈಕ್ಷಣಿಕ ಹೀಗೆ ಅನೇಕ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಪ್ರೌಢ ಶಾಲೆ ಮುಖ್ಯಗುರು ವಿಜಯಕುಮಾರ ಪಾಟೀಲ್ ಯರನಳ್ಳಿ ಇತರರಿದ್ದರು.