ಬೀದರ್: ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕ ಹಾಗೂ ತಾಲ್ಲೂಕು ಘಟಕಗಳ ಉದ್ಘಾಟನಾ ಸಮಾರಂಭ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜ. 7 ರಂದು ನಡೆಯಲಿದೆ ಎಂದು ಮಹಾಸಭಾ ಜಿಲ್ಲಾ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ಮಹಾಸಭಾ ಜಿಲ್ಲಾ ಮಹಿಳಾ ಘಟಕ ಹಾಗೂ ತಾಲ್ಲೂಕು ಘಟಕಗಳ ಉದ್ಘಾಟನಾ ಸಮಾರಂಭದ ಪ್ರಯುಕ್ತ ಇಲ್ಲಿಯ ಶರಣ ಉದ್ಯಾನದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಅಂದು ಜಿಲ್ಲಾ ಮಹಿಳಾ ಘಟಕ, ಆಯಾ ತಾಲ್ಲೂಕು ಘಟಕಗಳ ಜತೆಗೆ ತಾಲ್ಲೂಕು ಮಹಿಳಾ ಘಟಕಗಳ ಉದ್ಘಾಟನೆಯೂ ನಡೆಯಲಿದೆ ಎಂದು ತಿಳಿಸಿದರು.
ಕಳೆದ ಮಾರ್ಚ್‍ನಲ್ಲಿ ಬಸವಕಲ್ಯಾಣದಲ್ಲಿ ನಡೆದ ಪ್ರಥಮ ಲಿಂಗಾಯತ ರಾಷ್ಟ್ರೀಯ ಮಹಾ ಅಧಿವೇಶನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಅಧಿವೇಶನಕ್ಕೆ ಶ್ರಮಿಸಿದ ಹಾಗೂ ದಾಸೋಹ ಸೇವೆಗೈದವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಮಠಾಧೀಶರು, ಮಹಾಸಭಾ ಪದಾಧಿಕಾರಿಗಳು, ಬಸವ ಪರ ಸಂಘಟನೆಗಳ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಹಾಸಭಾ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ಸಿದ್ದಯ್ಯ ಕಾವಡಿ, ಮಹಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಹೊನ್ನಿಕೇರಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮಿರ್ಚೆ, ಹಿರಿಯ ಉಪಾಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಪ್ರಮುಖರಾದ ಜಯರಾಜ ಖಂಡ್ರೆ, ರಾಜೇಂದ್ರಕುಮಾರ ಗಂದಗೆ, ನೀಲಮ್ಮ ರೂಗನ್, ಸುವರ್ಣಾ ಚಿಮಕೋಡೆ, ಡಾ. ದೇವಕಿ ನಾಗೂರೆ, ಬಸವರಾಜ ತೊಂಡಾರೆ, ಡಾ. ಧನರಾಜ ರಾಗಾ, ಭಾರತಿ ಆರ್. ಪಾಟೀಲ, ನಗರದ ವಿವಿಧ ಬಡಾವಣೆಗಳ ಮಹಿಳಾ ಸಂಘಟನೆಗಳ ಪ್ರಮುಖರು, ಬಸವಾನುಯಾಯಿಗಳು ಪಾಲ್ಗೊಂಡಿದ್ದರು. ಸುಲೋಚನಾ ಪಟ್ನೆ ಪ್ರಾರ್ಥನೆ ನಡೆಸಿಕೊಟ್ಟರು. ಸುಮಾ ಭೂಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.