ಚಿಟಗುಪ್ಪ: ರಾಜ್ಯದ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಸಹಕಾರ ನೀಡದ ಇಂಥ ಸರ್ಕಾರ ಬಹಳ ದಿನ ನಡೆಯುವುದಿಲ್ಲ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆಕ್ರೋಶ ವ್ಯಕ್ತಪಡಿಸಿದರು.
ಬೇಮಳಖೇಡ ಗ್ರಾಮದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಬಂದ್ ಆಗಿದೆ. ಇಂಥ ಹಲವರು ಜನಪರ ಯೋಜನೆಗಳನ್ನು ನಿಲ್ಲಿಸಲಾಗಿದೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಬಾಳಿಗೆ ಹೊಸ ಬೆಳಕು ನೀಡಿದ್ದಾರೆ. ಕೇಂದ್ರದ ಪ್ರತಿಯೊಂದು ಯೋಜನೆ ಲಾಭ ಜನ ಪಡೆಯುತ್ತಿದ್ದಾರೆ. ಜಾತಿ, ಜನಾಂಗ ನೋಡದೆ ಪ್ರತಿ ವರ್ಗದ ಬಡವರಿಗೂ ಅನುಕೂಲವಾಗುವಂಥ ಕಾರ್ಯಕ್ರಮ ಕೇಂದ್ರ ನೀಡುತ್ತಿದೆ. ಹತ್ತು ವರ್ಷಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದೇವೆ ಎಂದು ತಿಳಿಸಿ ಲೆಕ್ಕ ಕೊಡಲು ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಂತೆ ಬೀದರ್ ಕ್ಷೇತ್ರದ ವಿಕಾಸಕ್ಕಾಗಿ ಸಚಿವ ಭಗವಂತ ಖೂಬಾ ದುಡಿಯುತ್ತಿದ್ದಾರೆ. ಅವರ ಶ್ರಮದ ಫಲವಾಗಿ ಜಿಲ್ಲೆಗೆ ಹತ್ತಾರು ರೈಲು ಯೋಜನೆ, ರಾಷ್ಟ್ರೀಯ ಹೆದ್ದಾರಿ ನೋಡುತ್ತಿದ್ದೇವೆ. ವಿಮಾನಯಾನ ಆರಂಭವಾಗಿದೆ, ಸೈನಿಕ್ ಶಾಲೆ ಮಂಜೂರಾಗಿದೆ. ಮೂರನೇ ಬಾರಿಯೂ ಮೋದಿಜಿ, ಖೂಬಾ ಅವರಿಗೆ ಆಶೀರ್ವದಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಸುಣಗಾರ, ಪ್ರಮುಖರಾದ ಬಸವರಾಜ ಚಟ್ನಳ್ಳಿ, ಸೂರ್ಯಕಾಂತ ಬೀರನಳ್ಳಿ, ರೇವಪ್ಪ ಮುದ್ದಾ, ಜಗನ್ನಾಥ ಬೂರಿ, ಸುರೇಶ ಮಾಶೆಟ್ಟಿ, ಶಿವಕುಮಾರ ಸ್ವಾಮಿ, ಘಾಳೆಪ್ಪ ಚಟ್ನಳ್ಳಿ, ಬಸವರಾಜ ಯದಲಾಪುರ, ಪ್ರಶಾಂತ ಸಿಂದೋಲ್, ಸಂಜೀವಕುಮಾರ, ರಾಮರಾವ ಇತರರಿದ್ದರು.
ಕಾರ್ಯಕ್ರಮದಲ್ಲಿ 150 ಫಲಾನುಭವಿಗಳಿಗೆ ಉಚಿತ ಗ್ಯಾಸ್, 325 ಜನರಿಗೆ ಆಯುಷ್ಮಾನ್ ಭಾರತ ಕಾಡ್೯ ವಿತರಣೆ, ಗಂಡ ನಿಧನರಾದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆಯಡಿ ಪತ್ನಿ ಸರಸ್ವತಿಗೆ ಎರಡು ಲಕ್ಷದ ರೂ. ಚೆಕ್ ಹಸ್ತಾಂತರಿಸಲಾಯಿತು.