ಜಿಲ್ಲೆ

ರಸ್ತೆಗೆ ಹಾಲು ಸುರಿದು ಪ್ರತಿಭಟಿಸಿದ ರೈತರು

ರೇವಣಸಿದ್ದಪ್ಪ ಪಾಟೀಲ್

ಬಸವಕಲ್ಯಾಣ: ಕಲಬುರಗಿ, ಬೀದರ್-ಯಾದಗಿರಿ ಹಾಲು ಒಕ್ಕೂಟ ಗಡಿ ಭಾಗದ ರೈತರಿಂದ ಹಾಲು ಒಯ್ಯುವುದನ್ನು ಸ್ಥಗಿತಗೊಳಿಸಿದ್ದನ್ನು ವಿರೋಧಿಸಿ ರಾಮತೀರ್ಥ ಗ್ರಾಮದಲ್ಲಿ ಸ್ಥಳೀಯರು ನೂರಾರು ಲೀಟರ್ ಹಾಲು ರಸ್ತೆಗೆ ಸುರಿದು ಪ್ರತಿಭಟಿಸಿದರು.
ಮೂರ್ನಾಲ್ಕು ದಿನಗಳಿಂದ ಹಾಲು ಪಡೆಯುವುದನ್ನು ಒಕ್ಕೂಟ ನಿಲ್ಲಿಸಿದ್ದರಿಂದ ರೈತರು ತೀವ್ರ ಸಮಸ್ಯೆ ಎದುರಿಸುವಂತಾಗಿದ್ದು, ಆರ್ಥಿಕ ಸಂಕಷ್ಟ ಅನುಭವಿಸಬೇಕಾಗಿದೆ. ಏಕಾಏಕಿ ಹಾಲು ತೆಗೆದುಕೊಂಡು ಹೋಗುವುದನ್ನು ನಿಲ್ಲಿಸಿದ್ದು ಸರಿಯಲ್ಲ. ತಕ್ಷಣ ಗ್ರಾಮದ ಎಲ್ಲ ರೈತರ ಹಾಲು ಕೊಂಡೊಯ್ಯಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಈಶ್ವರ ಬೊಕ್ಕೆ ಆಗ್ರಹಿಸಿದರು.
ವಿಷಯ ತಿಳಿಯುತ್ತಲೇ ಒಕ್ಕೂಟದ ನಿರ್ದೇಶಕ ಬಂಡುರಾವ ಕುಲಕರ್ಣಿ, ಅಧಿಕಾರಿ ಶಿವಾನಂದ, ಮೇಲ್ವಿಚಾರಕ ಪ್ರವೀಣ್, ಸಾಗರ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಕುರಿತು ಚರ್ಚಿಸಿದರು. ಊರಲ್ಲಿ ಹಾಲು ಉತ್ಪಾದಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡದ್ದರಿಂದ ಹಾಲು ಕೊಂಡೊಯ್ಯುವುದನ್ನು ನಿಲ್ಲಿಸಲಾಗಿದೆ. ಆದರೂ ತಾತ್ಕಾಲಿಕವಾಗಿ ಹಾಲು ಪಡೆಯಲು ವ್ಯವಸ್ಥೆ ಮಾಡಲಾಗುವುದು. ಶೀಘ್ರದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡುವುದಾಗಿ ಭರವಸೆ ನೀಡಿದರು.
ಗ್ರಾಪಂ ಸದಸ್ಯರಾದ ಉದಯಬಾನ್ ಬಿರಾದಾರ, ದತ್ತು ಬೊಕ್ಕೆ, ಶಿಲ್ಪಾ ದಯಾನಂದ, ಪ್ರಮುಖರಾದ ದತ್ತಾ ಬಿರಾದಾರ, ಅಜೀತ್ ಜಾಧವ್, ಬಾಜಿರಾವ ಬಿರಾದಾರ, ಶಿವಾಜಿ ಮುರಾರಿ ಇತರರಿದ್ದರು.