ಚಿಟಗುಪ್ಪ: ತಾಲೂಕಿನ ಮುದ್ನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಸಂಗಮೇಶ ಕೊಳಲಿ ವರ್ಗಾವಣೆಯಾದ ಕಾರಣ ಮಕ್ಕಳು ಬೀಳ್ಕೊಡುಗೆ ವೇಳೆ ಬಿಕ್ಕಿ, ಬಿಕ್ಕಿ ಅತ್ತ ಪ್ರಸಂಗ ಜರುಗಿತು.
ಐದು ವರ್ಷಗಳಿಂದ ಸಂಗಮೇಶ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಾಗಲಕೋಟ ಮೂಲದ ಇವರಿಗೆ, ಇತ್ತೀಚೆಗೆ ತವರು ಜಿಲ್ಲೆಯ ಜಮಖಂಡಿ ತಾಲೂಕಿನ ಆಲಬಾಳ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ ವರ್ಗವಾಗಿದೆ. ಹೀಗಾಗಿ ಗುರುವಾರ ಇಲ್ಲಿ ಆಯೋಜಿಸಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನೆಚ್ಚಿನ ಶಿಕ್ಷಕ ಬೇರೆಡೆಗೆ ಹೋಗುತ್ತಿರುವುದರಿಂದ ಬೇಸರಗೊಂಡು ವಿದ್ಯಾರ್ಥಿಗಳು ಕಂಬನಿ ಮಿಡಿದರು. ದಯವಿಟ್ಟು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗ್ಬೇಡಿ ಸರ್ ಎಂದು ಮಕ್ಕಳು ಅಳುತ್ತಾ ತಬ್ಬಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮ ಮುಗಿಸಿ ಕೊಠಡಿಯಿಂದ ಸಂಗಮೇಶ ಅವರು ಹೊರಬರುತ್ತಿದ್ದಂತೆಯೇ ಬಿಗಿದಪ್ಪಿಕೊಂಡು, ಕೈಮುಗಿದ ಮಕ್ಕಳು ನೀವು ಹೋಗಬೇಡಿ. ಇಲ್ಲಿಯೇ ಇರಿ ಎಂದು ಕಣ್ಣೀರು ಹಾಕಿದರು. ಇದನ್ನು ನೋಡಿ ಶಿಕ್ಷಕ ಸಂಗಮೇಶ ಅವರ ಕಣ್ಣಂಚಿನಿಂದಲೂ ನೀರು ಚಿಮ್ಮಿದವು. ಇದಕ್ಕೆ ಸಾಕ್ಷಿಯಾಗಿದ್ದ ಮುಖ್ಯಗುರು, ಸಹ ಶಿಕ್ಷಕರು ಹಾಗೂ ಗ್ರಾಮದ ಗಣ್ಯರ ಕಣ್ಣು ತೇವಗೊಂಡವು. ಇದು ಭಾವನಾತ್ಮಕ ಕ್ಷಣಕ್ಕೆ ಇದು ಸಾಕ್ಷಿಯಾಯಿತು.
ಐದು ವರ್ಷದ ಹಿಂದೆ ದೂರದ ಬಾಗಲಕೋಟೆ ಜಿಲ್ಲೆಯಿಂದ ಇಲ್ಲಿಗೆ ಬಂದಿರುವೆ. ಇಲ್ಲಿನ ಜನ ಹೇಗಿದ್ದಾರೋ ಎಂದು ಆರಂಭದಲ್ಲಿ ಭಯಗೊಂಡಿದ್ದೆ. ನಂತರ ಇಲ್ಲಿನ ಜನರ ಮತ್ತು ಮಕ್ಕಳ ಪ್ರೀತಿ, ಸ್ನೇಹ ಇಷ್ಟು ವರ್ಷ ಇಲ್ಲಿ ನೆಲೆ ನಿಲ್ಲುವಂತೆ ಮಾಡಿತು. ಮಕ್ಕಳ ಜತೆಗೆ ಮರೆಯಲಾರದಂಥ ಬಾಂಧವ್ಯ ಬೆಸೆದಿದೆ ಎಂದು ಸಂಗಮೇಶ ಭಾವುಕರಾಗಿ ಹೇಳಿದರು.
ಶಿಕ್ಷಕ ಸಂಗಮೇಶ ಮಕ್ಕಳನ್ನು ಎಂದೂ ಗದರಿಸಿಲ್ಲ. ತುಂಟಾಟ ಮಾಡಿದರೂ ಪ್ರೀತಿಯಿಂದಲೇ ಅವರಿಗೆ ತಿಳಿವಳಿಕೆ ನೀಡುತ್ತಿದ್ದರು. ಪಾಠವನ್ನೂ ಅಕ್ಕರೆಯಿಂದ ಮಾಡುತ್ತಿದ್ದರು. ಹೀಗಾಗಿ ಮಕ್ಕಳು ಶಿಕ್ಷಕನ ಮೇಲಿನ ಪ್ರೀತಿಯಿಂದ ಕಣ್ಣೀರು ಹಾಕಿದ್ದಾರೆ ಎಂದು ಪಾಲಕರು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷ ಸಂತೋಷ, ಉಪಾಧ್ಯಕ್ಷ ಪ್ರಲ್ಹಾದ್, ಮುಖ್ಯಗುರು ಎಂ.ಡಿ. ಖಾಲೀದ್, ಶಿಕ್ಷಕರಾದ ರೇವಶೆಟ್ಟಿ ತಂಗಾ, ರಾಜಕುಮಾರ, ಸುರೇಶ, ಮುಖಂಡರಾದ ವೀರಶೆಟ್ಟಿ, ಸಿದ್ದು ಪಾಟೀಲ್ ಇತರರಿದ್ದರು. ಶಿಕ್ಷಕ ಸಂಗಮೇಶ ಬಾಗಲಕೋಟದವರು. ಇದೀಗ ಅವರ ತವರು ಜಿಲ್ಲೆಗೆ ವರ್ಗವಾಗಿದ್ದಾರೆ.