ಜಿಲ್ಲೆ

ಸುಖಿ ಜೀವನಕ್ಕಾಗಿ ಭಗವತ್ಸೇವೆ ಮಾಡಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿಯ ಸಿದ್ಧಾರೂಢ ಮಠದ ಪೀಠಾಧಿಪತಿ ಪೂಜ್ಯಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರ 80ನೇ ಜಯಂತಿ ಮಹೋತ್ಸವವು ಬುಧವಾರ ಆರಂಭಗೊಂಡಿತು.
ಮಠದಲ್ಲಿ ಮೊದಲ ದಿನ ಶ್ರೀಗಳ ಪಾದಪೂಜೆ, ನಾಣ್ಯಗಳಿಂದ ತುಲಾಭಾರ, ಪ್ರವಚನ ಮೊದಲಾದ ಕಾರ್ಯಕ್ರಮಗಳು ನಡೆದವು. ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ.ಚಂದ್ರಪ್ಪ ಭತಮುರ್ಗೆ ಹಾಗೂ ಸಿಬ್ಬಂದಿಗಳು ನಾಣ್ಯಗಳಿಂದ ಪೂಜ್ಯರ ತುಲಾಭಾರ ಮಾಡಿ ಭಕ್ತಿ ಸಮರ್ಪಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ಸುಖಿ ಜೀವನಕ್ಕಾಗಿ ಸಮಸ್ತ ಕರ್ಮೀಂದ್ರಿಯಗಳಿಂದ ಭಗವಂತನ ಸೇವೆ ಮಾಡಬೇಕು. ಕೈ ಪರಮಾತ್ಮನ ಸ್ವರೂಪವಾಗಿದೆ. ಭಗವಂತನ ಪೂಜೆ, ಜಪ, ದಾನ, ಧರ್ಮ ಮಾಡುವುದಕ್ಕಾಗಿ ಇದನ್ನು ಬಳಸಬೇಕೆಂದು ತಿಳಿಸಿದರು.
ಜಪವೆಂದರೆ ಭಗವಂತನ ಸಮೀಪಕ್ಕೆ ಹೋಗಲು ನೋಂದಣಿ ಮಾಡಿಸಿದಂತೆ. ಏನು ಮಾಡಿದರೆ ಪುಣ್ಯ ಲಭಿಸುತ್ತದೆಯೋ ಅದನ್ನು ಮಾಡಬೇಕು. ಒಳ್ಳೆಯ ಕರ್ಮ ಹಿತ ಹಾಗೂ ಕೆಟ್ಟ ಕರ್ಮ ದುಃಖ ಉಂಟು ಮಾಡುತ್ತದೆ. ಕೈಯಿಂದಲೇ ದೇವರು ಸಿಗುತ್ತಾನೆ. ಸುಖ, ದುಃಖಕ್ಕೂ ಅದುವೇ ಕಾರಣವಾಗುತ್ತದೆ. ಸಂಸ್ಕೃತಿ ಇಲ್ಲದ ಸಭ್ಯತೆ ಪ್ರಾಣವಿಲ್ಲದ ದೇಹದಂತೆ ಎಂದು ಹೇಳಿದರು.
ಕಲಬುರಗಿಯ ಮಾತೋಶ್ರೀ ಲಕ್ಷ್ಮಿದೇವಿ, ಮುಚಳಂಬದ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿದರು. ಶ್ರೀ ಶಂಕರಾನಂದ ಸ್ವಾಮೀಜಿ, ಶ್ರೀ ಅದ್ವೈತಾನಂದ ಸ್ವಾಮೀಜಿ, ಶ್ರೀ ಗಣೇಶಾನಂದ ಮಹಾರಾಜ, ಮಾತೆ ಸಿದ್ಧೇಶ್ವರಿ, ಮಾತೆ ಆನಂದಮಯಿ, ಮಾತೆ ಸುಶಾಂತಾ, ಮಾತೆ ಜ್ಞಾನೇಶ್ವರಿ, ಮಾತೆ ಸಂಗೀತಾದೇವಿ, ಭಾರತಿಬಾಯಿ ಕಣಜಿ, ಲಲಿತಾಬಾಯಿ ಶೆಟಕಾರ, ಶ್ರೀದೇವಿ ಕರಡಿಯಾಳ, ಗೋಪಾಲ ಶಾಸ್ತ್ರಿ, ವಿನಾಯಕ ಸತೀಶ್, ಡಾ.ಹಾವಗಿರಾವ ಮೈಲಾರೆ, ಈಶ್ವರಗೌಡ ಕಮಡಳ್ಳಿ, ಉದಯಭಾನು ಹಲವಾಯಿ, ಓಂಕಾರ ಇಂದ್ರಾಳೆ, ಪ್ರಭು ಬೆಣ್ಣೆ ಇದ್ದರು. ಡಿ.8ರಂದು ಜಯಂತ್ಯುತ್ಸವ ಸಮಾರೋಪ ಇದೆ.