ಬೀದರ್: ಸಂವಿಗಾನ ಸಂಗೀತ ಅಕಾಡೆಮಿ 5ನೇ ವಾರ್ಷಿಕೋತ್ಸವ ನಿಮಿತ್ತ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಜನಮನ ರಂಜಿಸಿತು.
ಅಕಾಡೆಮಿಯ ಹಲವು ಗಾಯಕರು ಮತ್ತು ಮಕ್ಕಳು ದೇಶಭಕ್ತಿ ಸೇರಿ ವಿವಿಧ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ತಲೆದೂಗಿಸುವಂತೆ ಮಾಡಿದರು. ಅಕಾಡೆಮಿ ನಿರ್ದೇಶಕಿ ಭಾನುಪ್ರಿಯಾ ಅರಳಿ ನೇತೃತ್ವದಲ್ಲಿ ಗಾಯಕರಾದ ಅಮೃತಾಶೆಟ್ಟಿ, ಭಾಗ್ಯಲಕ್ಷ್ಮಿ ಗುರುಮೂರ್ತಿ, ದೀಪಾ ಕಿರಣ, ಸುನೀತಾ, ಸಂಗೀತಾ ಮೌನೀಶ್, ಮಹೇಶ್ವರಿ ಹೇಡೆ, ನರಸಮ್ಮ ಪಾಟೀಲ್, ಪ್ರಣೀತಾ ಕೋರೆ, ದತ್ತೇಶ್ವರಿ ಇತರರು ಶರಣರು ಮತ್ತು ದಾಸರ ಪದ, ಜಾನಪದ, ಭಾವಗೀತೆ, ದೇಶ ಭಕ್ತಿ ಗೀತೆಗಳನ್ನು ಹಾಡಿದರು. ಕೆಲ ಹಾಡಿಗೆ ಪ್ರೇಕ್ಷಕರು ಹೆಜ್ಜೆ ಹಾಕಿದರು. ವಚನ ಗಾಯನ, ನೃತ್ಯ ರೂಪಕ ಸಹ ಪ್ರದರ್ಶಿಸಲಾಯಿತು.
ಜಿಪಂ ಸಿಇಒ ಶಿಲ್ಪಾ ಉದ್ಘಾಟಿಸಿ ಮಾತನಾಡಿ, ಸಂಗೀತವು ಮಕ್ಕಳಿಂದ ಹಿರಿಯರವರೆಗೆ ಖುಷಿ ನೀಡುವ ಜತೆಗೆ ಏಕಾಗ್ರತೆ ಮತ್ತು ಆತ್ಮ ಸ್ಥೈರ್ಯ ಮೂಡಿಸುವಲ್ಲಿ ಅತ್ಯಂತ ಸಹಕಾರಿ ಅಸ್ತ್ರವಾಗಿದೆ. ಪಠ್ಯದ ಜತೆಯಲ್ಲಿ ಪಠ್ಯೇತರ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಅಕಾಡೆಮಿ ನಿರ್ದೇಶಕಿ ಭಾನುಪ್ರಿಯಾ ಅರಳಿ ಮಾತನಾಡಿ, ಮಹಿಳೆಯರಿಂದಲೇ ಸ್ಥಾಪಿಸಿದ ಸಂಸ್ಥೆ ಸವಿಗಾನ ಸಂಗೀತ ಅಕಾಡೆಮಿ. ಸಂಗೀತದ ಹವ್ಯಾಸಿಗಳಿಗೆ ವೇದಿಕೆ ಕಲ್ಪಿಸುವುದು, ಮಕ್ಕಳಲ್ಲಿ ಸಂಗೀತ ವಿದ್ಯೆಯ ಆಸಕ್ತಿ ಮೂಡಿಸಿ, ಅವರಿಗೆ ತರಬೇತಿ ನೀಡಿ ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಇತರರಿದ್ದರು. ಸುಮಿತ್ರಾಬಾಯಿ ಅರಳಿ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಿಂಗರಾಜ ಅರಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಸೂರ್ಯಕಾಂತ ಅರಳಿ, ಕೆ.ಗುರುಮೂರ್ತಿ ಇತರರಿದ್ದರು.