ಜಿಲ್ಲೆ

ಸೀಮಿನಾಗನಾಥ ರಥೋತ್ಸವ ಅದ್ದೂರಿ

ರೇವಣಸಿದ್ದಪ್ಪ ಪಾಟೀಲ್

ಹುಮನಾಬಾದ್: ಹಳ್ಳಿಖೇಡ(ಬಿ) ಪಟ್ಟಣದ ಆರಾಧ್ಯ ದೈವ ಶ್ರೀ ಸೀಮಿನಾಗನಾಥ ದೇವಸ್ಥಾನ ಜಾತ್ರಾ ಮಹೋತ್ಸವ ನಿಮಿತ್ತ ಅಪಾರ ಭಕ್ತರ ಜೈಘೋಷಗಳ ಮಧ್ಯೆ ಅದ್ದೂರಿಯಾಗಿ ರಥೋತ್ಸವ ಜರುಗಿತು.
ಮಹಾರಾಷ್ಟ್ರ, ತೆಲಂಗಾಣ ಸೇರಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಪಲ್ಲಕ್ಕಿ ಮೆರವಣಿಗೆಯುದ್ದಕ್ಕೂ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಜರುಗಿದವು. ಥೇರ್ ಮೈದಾನಕ್ಕೆ ಬಂದ ಮೆರವಣಿಗೆಯಲ್ಲಿ ಚಳಿಯನ್ನೂ ಲೆಕ್ಕಿಸದೆ ಅಸಂಖ್ಯ ಭಕ್ತರು ನಿಂತು ರಥೋತ್ಸವ ವೀಕ್ಷಿಸಿದರು.
ಮುತ್ತಿನ ಪಲ್ಲಕಿ, ಡೊಳ್ಳು ಕುಣಿತ, ಬಾಜಾ ಭಜಂತ್ರಿ ಮತ್ತಿತರ ವಾದ್ಯ ಮೇಳ ಹಾಗೂ ಜೈಘೋಷಗಳ ಸದ್ದು, ಬಾನೆತ್ತರಕ್ಕೆ ಹಾರಿದ ಪಟಾಕಿಗಳ ಬಣ್ಣ ಬಣ್ಣದ ಚಿತ್ತಾರ ಮಧ್ಯೆ ರಥೋತ್ಸವ ನೆರವೇರಿತು. ಅಸಂಖ್ಯಾತ ಭಕ್ತರಿಂದ ಸೀಮಿನಾಗನಾಥ ಮಹಾರಾಜಕೀ ಜೈ ಎಂಬ ಘೋಷಣೆಗಳು ಮೊಳಗಿದವು.
ಸ್ಥಳೀಯ ಹಿರೇಮಠದ ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಪಲ್ಲಕ್ಕಿ ಮತ್ತು ರಥೋತ್ಸವಕ್ಕೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ದರ್ಶನ ಪಡೆದರು.
ದೇವಸ್ಥಾನದಲ್ಲಿ ದರ್ಶನ ಪಡೆಯಲು ಬೆಳಗ್ಗೆಯಿಂದ ಆರಂಭಗೊಂಡ ಭಕ್ತರ ಸಾಲು ತಡರಾತ್ರಿವರೆಗೂ ಮುಂದುವರಿದಿತ್ತು. ಭಕ್ತರನ್ನು ಸಾಲಿನಲ್ಲಿ ನಿಲ್ಲಿಸಲು ದೇವಸ್ಥಾನ ಸಮಿತಿ ಸೇವಕರು ಹಾಗೂ ಪೊಲೀಸರು ಶ್ರಮಿಸಿದರು. ದೇವರ ವಾರ ಆಗಿದ್ದರಿಂದ ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು.
ಜಂಗಿ ಕುಸ್ತಿ ಸ್ಪರ್ಧೆ: ಜಾತ್ರಾ ಮಹೋತ್ಸವ ನಿಮಿತ್ತ ಇಲ್ಲಿ ನಡೆಯುವ ಜಂಗಿ ಕುಸ್ತಿ ಜಿಲ್ಲೆಯಲ್ಲೇ ಖ್ಯಾತಿ ಪಡೆದಿದೆ. ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ರಾಜ್ಯ ಸೇರಿ ನೆರೆಯ ಮಹಾರಾಷ್ಟ್ರ, ತೆಲಂಗಾಣದ ಖ್ಯಾತ ಪೈಲ್ವಾನರು ಪಾಲ್ಗೊಂಡಿದ್ದರು. ಸಂಜೆವರೆಗೂ ನಡೆದ ಜಂಗಿ ಕುಸ್ತಿ ವೀಕ್ಷಣೆಗೆ ಜನಸಾಗರವೇ ಹರಿದು ಬಂದಿತು.