ಹುಮನಾಬಾದ್: ಏಡ್ಸ್ ಸೋಂಕಿತ ರೋಗ. ಇದರಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಮೋಹನ ಎಸ್.ಪೋಳ ಹೇಳಿದರು.
ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸಂಸ್ಥೆ, ತಾಲೂಕು ಆರೋಗ್ಯ ಸೇವಾ ಸಮಿತಿ, ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಡಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಏಡ್ಸ್ ಮತ್ತು ಅಂಗವಿಕಲರ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಏಡ್ಸ್ ಬಗ್ಗೆ ಜನರಲ್ಲಿ ಬೇರೂರಿರುವ ತಪ್ಪು ಕಲ್ಪನೆ ತೊಡೆದು ಹಾಕಿ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಮಾತನಾಡಿ, ಆರೋಗ್ಯ ಇಲಾಖೆಯಿಂದ ಹಲವಾರು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ತಜ್ಞ ವೈದ್ಯ ಡಾ.ಬಸವಂತರಾವ ಗುಮ್ಮೆದ್ ಮಾತನಾಡಿದರು. ತಾಪಂ ಇಒ ಡಾ.ಗೋವಿಂದ, ವಕೀಲರ ಸಂಘದ ತಾಲೂಕು ಉಪಾಧ್ಯಕ್ಷ ಅಶೋಕ ವರ್ಮಾ, ಕಾರ್ಯದರ್ಶಿ ಸಂತೋಷ ಸ್ವಾಮಿ, ಡಾ.ಇಂದ್ರಜೀತ್, ಡಾ.ಸುರೇಶ ನಾಯರ್, ರವಿಕುಮಾರ ಸುವರ್ಣಾಕುಮಾರಿ, ಶೈಲಶ್ರೀ, ರೋಹನ್, ಜಗದೇವಿ, ಅವಿನಾಶ, ಶೋಭಾ, ಸಿದ್ಧರಾಮ ಹೂಗಾರ ಇತರರಿದ್ದರು.
ಶಿವಕುಮಾರ ಕಂಪ್ಲಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಸಂಗಮಕರ್ ನಿರೂಪಣೆ ಮಾಡಿದರು. ಶಿವಕುಮಾರ ಕಿವಡೆ ವಂದಿಸಿದರು. ಉತ್ತಮ ಆಪ್ತ ಸಮಾಲೋಚಕಿ ಗೀತಾರಡ್ಡಿ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಶ್ರೀ ವೀರಭದ್ರೇಶ್ವರ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕ ಆಸ್ಪತ್ರೆಯಿಂದ ತಾಪಂ ಕಚೇರಿವರೆಗೆ ಜಾಥಾ ನಡೆಸಿದರು.