ಜಿಲ್ಲೆ

ಬಸವ ದಳ ಸಮಾವೇಶಕ್ಕೆ 2 ಸಾವಿರ ಪ್ರತಿನಿಧಿಗಳು

ರೇವಣಸಿದ್ದಪ್ಪ ಪಾಟೀಲ್

ಬೀದರ್: ನಗರದ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನ. 27 ರಂದು ಸಂಜೆ 5ಕ್ಕೆ ಹಮ್ಮಿಕೊಂಡ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಸಮಾವೇಶ ಹಾಗೂ ನೂತನ ರಾಷ್ಟ್ರೀಯ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ 2 ಸಾವಿರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.
ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಬಸವ ದಳದ ರಾಜ್ಯ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಜಿಲ್ಲೆಗಳು ಹಾಗೂ ದೇಶದ ವಿವಿಧ ರಾಜ್ಯಗಳ ಪ್ರತಿನಿಧಿಗಳಿಗೆ ನೌಕರರ ಭವನ, ಎಂ.ಎಸ್. ಪಾಟೀಲ ಪಂಕ್ಷನ್ ಹಾಲ್, ವಸತಿ ಗೃಹಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದಲ್ಲಿ ರುಚಿಕಟ್ಟಾದ ಊಟ, ಶುದ್ಧ ಕುಡಿಯುವ ನೀರು ಮೊದಲಾದ ವ್ಯವಸ್ಥೆ ಇರಲಿದೆ ಎಂದು ತಿಳಿಸಿದ್ದಾರೆ.
ಸಾನಿಧ್ಯ ವಹಿಸಲಿರುವ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ಅವರು ನೂತನ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪುನಶ್ಚೇತನಗೊಂಡ 100 ಘಟಕಗಳ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ನಾಡಿನ ಮಠಾಧೀಶರು, ಚಿಂತಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಬಸವ ದಳದ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಮಾನ್ಯತೆ, ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಣೆ, ಬಸವ ಕಾರಿಡಾರ್ ರಚನೆ, ಕರ್ನಾಟಕದ ಸಾಂಸ್ಕøತಿಕ ರಾಯಭಾರಿಯಾಗಿ ಬಸವಣ್ಣನವರ ಹೆಸರು ಘೋಷಣೆ ಮಾಡುವುದು ಸೇರಿದಂತೆ ವಿವಿಧ ವಿಷಯಗಳ ಮೇಲೆ ಸಮಾವೇಶವು ಬೆಳಕು ಚೆಲ್ಲಲಿದೆ ಎಂದು ಹೇಳಿದ್ದಾರೆ.
ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಬಸವ ದಳವನ್ನು ಬಲಗೊಳಿಸುವುದು, ಬಸವ ತತ್ವ ಪ್ರಚಾರ ಹಾಗೂ ಪ್ರಸಾರಕ್ಕೆ ಒತ್ತು ಕೊಡುವುದು, ಲಿಂಗಾಯತ ಧರ್ಮದ ಜಾಗೃತಿ, ದೇಶಾಭಿಮಾನ ಮೂಡಿಸುವುದು ಮೊದಲಾವು ಸಮಾವೇಶದ ಪ್ರಮುಖ ಉದ್ದೇಶಗಳಲ್ಲಿ ಸೇರಿವೆ ಎಂದು ಹೇಳಿದ್ದಾರೆ.
ಬಸವ ದಳದ ಪದಾಧಿಕಾರಿಗಳು ಸಮಾವೇಶವನ್ನು ಅರ್ಥಪೂರ್ಣ ಹಾಗೂ ಸರ್ವ ರೀತಿಯಿಂದಲೂ ಯಶಸ್ವಿಗೊಳಿಸುವ ದಿಸೆಯಲ್ಲಿ ಭರದ ಸಿದ್ಧತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.