ಜಿಲ್ಲೆ

ಬದುಕಿನ ವಿಷಯ ಚುಟುಕುಗಳಾಗಲಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಆಧುನಿಕ ಜೀವನ ಪದ್ಧತಿಯಿಂದ ಮನುಷ್ಯ ಯಾತ್ರಿಕ ಬದುಕು ಸಾಗಿಸುತ್ತಿದ್ದಾನೆ. ಸಾಹಿತಿಗಳಾದವರು ಜೀವನದ ಅನೇಕ ವಿಷಯಗಳನ್ನು ರಸವತ್ತಿನೊಂದಿಗೆ ಚಟುಕುಗಳಾಗಿ ಬರೆಯಬಹುದು ಎಂದು ಚುಟುಕು ಬರಹಗಾರ ಎಚ್. ಡುಂಡಿರಾಜ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಬಸವಮುಕ್ತಿ ಮಂದಿರದಲ್ಲಿ ಏರ್ಪಡಿಸಿದ್ದ ಸಾಹಿತ್ಯ-ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅತ್ಯಂತ ಕಡಿಮೆ ಶಬ್ದಗಳನ್ನು ಬಳಸಿ ವಿಶೇಷ ಅರ್ಥ ಬರುವಂತೆ ಕೊನೆಯಲ್ಲಿ ಪಂಚ್ನೊಂದಿಗೆ ಚುಟುಕು ಮೂಡಿಬರಬೇಕು. ಆಗದು ಎಲ್ಲರನ್ನೂ ಓದಿಸುತ್ತದೆ ಮತ್ತು ಗಮನ ಸೆಳೆಯುತ್ತದೆ ಎಂದರು.
ಹಾಸ್ಯ ಬರಹಗಾರರು ಪುರುಷರಾಗಿರುವುದರಿಂದ ಮಹಿಳೆ ಬಗ್ಗೆ ಬರೆಯುವುದು ವಾಡಿಕೆ. ಹೆಣ್ಣು ಮಕ್ಕಳು ಗಂಡಿನ ಬಗ್ಗೆ ಬರೆಯಲಿ. ಆದರೆ ಹೆಣ್ಣನ್ನು ಹಾಸ್ಯಕ್ಕಾಗಿ ಪದಪ್ರಯೋಗ ಮಾಡುತ್ತೇನೆಯೇ ಹೊರತು, ಕೀಳಾಗಿ ಭಾವಿಸುವುದಿಲ್ಲ, ಅವರನ್ನು ಗೌರವದಿಂದ ಕಾಣುತ್ತೇನೆ ಎಂದು ಸಂವಾದದಲ್ಲಿ ಪ್ರಶ್ನೆಗೆ ಉತ್ತರಿಸಿದರು.
ಹಾಸ್ಯ ಸಾಹಿತಿ ವೈ.ವಿ. ಗುಂಡೂರಾವ ಮಾತನಾಡಿ, ಬೀದರ್ ಜಿಲ್ಲೆ ಭಾಷೆ ಸೊಗಡು ವಿಶಿಷ್ಟವಾಗಿದೆ. ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿ ಹೇಗಿದ್ದಾರೆ ಎಂದು ಕೇಳಿದರೆ ಈ ಭಾಗದಲ್ಲಿ ಸರಿಹೋಗಿದ್ದಾರೆ ಎಂದು ಹೇಳುತ್ತಾರೆ. ಇಲ್ಲಿಯ ಭಾಷೆ ಸೊಗಡು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಇಲ್ಲಿನ ಪ್ರತಿಪದಕ್ಕೂ ಬಳಸುವ ಬೀ ಎನ್ನುವ ಪ್ರತ್ಯಯ ಬೀದರ್ ಸೂಚಿಸುವಂತಿದೆ ಎಂದರು.
ಹಾಸ್ಯ ಬರಹಗಾರ ಎಂ.ಎಸ್. ನರಸಿಂಹಮೂತರ್ಿ ಮಾತನಾಡಿ, ಎಲ್ಲರೂ ಶಿಕ್ಷಕರಿಗೆ ಗೌರವ ಕೊಡಬೇಕು. ಶಿಕ್ಷಕರಿಂದಲೇ ನಾವೆಲ್ಲ ಉನ್ನತ ಸ್ಥಾನಕ್ಕೆ ಬಂದಿದ್ದೇವೆ. ಜೀವನದ ಪ್ರತಿ ಹೆಜ್ಜೆಯಲ್ಲೂ ಹಾಸ್ಯವನ್ನು ಕಾಣಬಹುದು. ಮುಂದಿನ ದಿನಗಳಲ್ಲಿ ಬೀದರ್ ಜಿಲ್ಲೆಯಿಂದಲೂ ಹಾಸ್ಯ ಬರಹಗಾರರು ಉದಯಿಸಬೇಕು ಎಂದು ಹೇಳಿದರು.
ಬೆಂಗಳೂರಿನ ಸೈಸೆಕ್ ಸಂಸ್ಥೆ ಕಾರ್ಯಕ್ರಮ ವ್ಯವಸ್ಥಾಪಕ ಬಿ.ಎಚ್. ವನಜಾಕ್ಷಿ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ ವಸ್ತ್ರದ್ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂವಾದದಲ್ಲಿ ಪಾರ್ವತಿ ಸೋನಾರೆ, ಡಾ.ಶ್ರೇಯಾ ಮಹೇಂದ್ರಕರ್, ಕೇಶವ ದಡ್ಡೆ, ಎಸ್.ಎಸ್. ಹೊಡಮನಿ, ಉಮಾದೇವಿ ಬಾಪುರೆ ಭಾಗವಹಿಸಿದ್ದರು. ಜಯದೇವಿ ಯದಲಾಪುರೆ ನಿರೂಪಣೆ ಮಾಡಿದರು. ಡಾ.ಬಸವರಾಜ ಬಲ್ಲೂರು ವಂದಿಸಿದರು.
ಶಿವಕುಮಾರ ಕಟ್ಟೆ ರಚಿಸಿರುವ, ಗಾಯಕ ಶಂಭುಲಿಂಗ ವಾಲ್ದೊಡ್ಡಿ ಹಾಡಿರುವ ಮತ್ತು ದಿಲೀಪ ಕಾಡವಾದ ಸಂಗೀತ ಸಂಯೋಜನೆ ಮಾಡಿರುವ ಅನಂತಕಾಲ ಉರುಳಿದವು… ಹಾಗೂ ಭಾವಸಾಗರಿ ಎಂಬ ಎರಡು ಭಾವಗೀತೆಗಳ ಧ್ವನಿಮುದ್ರಿತ ಥಂಬ್ಲೈನ್ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ.ಸಂಜೀವಕುಮಾರ ಅತಿವಾಳೆ ಅವರನ್ನು ಸನ್ಮಾನಿಸಲಾಯಿತು.